ಪಿಎಚ್ಸಿ ಅಭಿವೃದ್ಧಿಗೆ ಕೇಂದ್ರ ಒತ್ತು
ಮಂಗಳೂರು: ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್ಸಿ)ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ಎಂ.ಎಂ.ಪಲ್ಲಂ ರಾಜು ಹೇಳಿದ್ದಾರೆ.
ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಒಟ್ಟು ರು. 75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಲೀಲಾ ನಾರಾಯಣ ಶೆಟ್ಟಿ ಸ್ಮಾರಕ ಕ್ಯಾನ್ಸರ್ ಸಂಸ್ಥೆ ಮತ್ತು ಡಾ.ಎನ್.ವಿ. ಅಡ್ಯಂತಾಯ ಸಂಶೋಧನಾ ಮತ್ತು ಸೂಪರ್ ಸ್ಪೆಶಾಲಿಟಿ ಬ್ಲಾಕ್ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯತ್ತ ಗಮನ ಹರಿಸಿದ್ದು, ಸರ್ಕಾರೇತರ ಸಂಸ್ಥೆಗಳೂ ತಮ್ಮದೇ ಕೊಡುಗೆ ನೀಡುತ್ತಿವೆ. ಇಲ್ಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆ ಸಮುದಾಯದಿಂದ ಪಡೆದು ಚಾರಿಟೇಬಲ್ ಟ್ರಸ್ಟ್ ಮೂಲಕ ಮತ್ತೆ ಸಮುದಾಯಕ್ಕೆ ಕೊಡುಗೆ ನೀಡುತ್ತಿದೆ. ಇಂಥ ಕಾರ್ಯ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಈ ಶಿಕ್ಷಣ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರಲ್ಲದೆ, ಸಮಾಜ ಸೇವೆಯ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅಮೆರಿಕಾ ಪಿರ್ಟ್ಸ್ಬರ್ಗ್ನ ಕಾರ್ಡಿಯೋಲಜಿಸ್ಟ್ ಡಾ.ನಾರಾಯಣ ಶೆಟ್ಟಿ, ನಿಟ್ಟೆ ವಿವಿ ಕುಲಪತಿ ಡಾ. ವಿನಯ ಹೆಗ್ಡೆ, ಸಹಕುಲಪತಿ ಪ್ರೊ.ಡಾ. ಎಂ. ಶಾಂತರಾಮ ಶೆಟ್ಟಿ, ಉಪಕುಲಪತಿ ಪ್ರೊ.ಡಾ. ರಮಾನಂದ ಶೆಟ್ಟಿ, ನಿರ್ದೇಶಕರಾದ ವಿಶಾಲ್ ಹೆಗ್ಡೆ, ಡಾ.ಎನ್.ಆರ್.ಶೆಟ್ಟಿ, ರಿಜಿಸ್ಟ್ರಾರ್ ಪ್ರೊ.ಸುಧಾಕರ ನಾಯ್ಕ ಹಾಜರಿದ್ದರು.