ಪ್ರತಿಭಟನೆ ಹಿನ್ನೆಲೆ: 'ಕೈ' ಮುಖಂಡರ ವಿರುದ್ಧ ದೂರು
ಸುಳ್ಯ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಸುಳ್ಯ ತಾಲೂಕು ಚುನಾವಣಾಧಿಕಾರಿ ತಹಸೀಲ್ದಾರ್ ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ವಿವಿಧ ಬೇಡಿಕೆ ಮುಂದಿರಿಸಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿರುವ ತಮಿಳು ಕಾರ್ಮಿಕರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಕಾರ್ಮಿಕರು ಸೋಮವಾರ ಬೃಹತ್ ರ್ಯಾಲಿ ನಡೆಸಿದ್ದರಲ್ಲದೆ, ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕೆ.ಪಿ.ಸಿ.ಸಿ. ಸದಸ್ಯ ಡಾ. ಬಿ. ರಘು, ಕೇಂದ್ರ ನಾರು ಮಂಡಳಿ ಸದಸ್ಯ ಟಿ.ಎಂ. ಶಹೀದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ, ಕಾಂಗ್ರೆಸ್ ನಾಯಕ ನಿತ್ಯಾನಂದ ಮುಂಡೋಡಿ ಮತ್ತಿತರರ ವಿರುದ್ಧ ತಾಲೂಕು ಚುನಾವಣಾಧಿಕಾರಿ ಸುಳ್ಯ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಪ್ರತಿಭಟನೆ ನಡೆಸಿದ ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡಿ, ಆಶ್ವಾಸನೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಪ್ರತಿಯನ್ನು ಚುನಾವಣಾಧಿಕಾರಿ ಜಿಲ್ಲಾಧಿಕಾರಿಗೂ ಸಲ್ಲಿಸಿರುವುದಾಗಿ ತಿಳಿದುಬಂದಿದೆ.