ರಸ್ತೆ ಬದಿ ತ್ಯಾಜ್ಯ: ಪಿಡಿಒ ನೋಟಿಸ್
ಮಂಗಳೂರು: ದೇರಳಕಟ್ಟೆ, ಕೊಣಾಜೆ, ನಾಟೆಕಲ್, ಅಸೌಗೋಳಿ ಪ್ರದೇಶಗಳಲ್ಲಿ ರಸ್ತೆ ಬದಿ ಕಸದರಾಶಿಗೆ ಮುಕ್ತಿ ಸಿಗಲಾರಂಭಿಸಿದೆ. ಬೆಳ್ಮ ಗ್ರಾಮ ಪಂಚಾಯ್ತಿ ಕಸ ಬಿಸಾಡುವ ಸಂಸ್ಥೆಗಳಿಗೆ ನೋಟಿಸ್ ನೀಡಿದೆ.
ರಸ್ತೆಬದಿ ರಸದ ರಾಶಿ ದುರ್ನಾತ ಬೀರುತ್ತಿರುವ ಬಗ್ಗೆ ಸಾರ್ವಜನಿಕ ದೂರಿನ ಮೇರೆಗೆ ಒಂಬುಡ್ಸ್‌ಮನ್ ಶೀನ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಕ್ಷಣವೇ ಕಸ ವಿಲೇವಾರಿ ಮಾಡುವಂತೆ ಸೂಚಿಸಿದ್ದರು. ಈ ವಿಚಾರ ಮಾ.25ರಂದು 'ಕನ್ನಡಪ್ರಭ'ದಲ್ಲಿ ಪ್ರಕಟವಾಗಿತ್ತು. ಇದೀಗ ಮರುದಿನವೇ ಬೆಳ್ಮ ಗ್ರಾಮ ಪಂಚಾಯ್ತಿ ಕೊಣಾಜೆ ರಸ್ತೆ ಬದಿಯಲ್ಲಿರುವ ಕಸವನ್ನು ತ್ವರಿತ ವಿಲೇವಾರಿ ಮಾಡಿದೆ. ಅಲ್ಲದೆ ಎಲ್ಲೆಂದರಲ್ಲಿ ಕಸ ಬಿಸಾಡಿ ಪರಿಸರ ನಾಶಕ್ಕೆ ಕಾರಣವಾದ 10 ಮಂದಿಗೆ ಪಂಚಾಯ್ತಿ ನೋಟಿಸ್ ನೀಡಿದೆ. ಕಸವನ್ನು ಅವರವರೇ ವಿಲೇವಾರಿ ಮಾಡಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಮಾನಾಥ ಪೂಂಜ ತಿಳಿಸಿದ್ದಾರೆ. ಅದೇ ರೀತಿ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆ ಪಕ್ಕ ತುಂಬಿಹೋಗಿರುವ ಕಸ ವಿಲೇವಾರಿಗೆ ಸೂಚಿಸಲಾಗಿದೆ. ಕೋಟೆಕಾರ್ ಪಂಚಾಯ್ತಿ ವ್ಯಾಪ್ತಿಯಲ್ಲೂ ಕಸ ವಿಲೇವಾರಿಗೆ ವೇಗ ಸಿಕ್ಕಿದೆ.