ವ್ಯಕ್ತಿ ನಾಪತ್ತೆ; ದೂರು
ಪಡುಬಿದ್ರಿ: ಇಲ್ಲಿನ ನಂದಿಕೂರು ಗ್ರಾಮದ ಮೂಡು ಫಲಿಮಾರು ಮನೆ ನಿವಾಸಿ ಹಿದಾಯತ್ (21) ಎಂಬವರು ಸೋಮವಾರದಿಂದ ಕಾಣೆಯಾಗಿದ್ದಾರೆ. ಅವರು ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಮನೆಗೆ ವಾಪಾಸ್ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ತಾಯಿ ರಬಾನು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾಡಿನಲ್ಲಿ ಬಿದ್ದು ವ್ಯಕ್ತಿ ಸಾವು
ಹೆಬ್ರಿ: ಕಾಡಿನಲ್ಲಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಇಲ್ಲಿನ ಬೊಮ್ಮರ ಬೆಟ್ಟು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಪುಕುಣು ಯಾನೆ ಸುಂದರ ನಾಯ್ಕ (62) ಮೃತರು. ಅವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಈಗಾಗಲೇ ಎರಡು ಬಾರಿ ಲಘು ಹೃದಯಾಘಾತವಾಗಿತ್ತು. ಅವರು ಮಾನಸಿಕ ಕಾಯಿಲೆಯಿಂದ ಕೂಡ ಬಳಲುತ್ತಿದ್ದರು. ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಗೆ ಸುಂದರ ನಾಯ್ಕ ಮೃತದೇಹ ಕಾರ್ಕಳ ತಾಲೂಕು ವರಂಗ ಗ್ರಾಮದ ಕಾಡುಹೊಳೆ ಸೇತುವೆ ಸಮೀಪ ಪತ್ತೆಯಾಗಿದ್ದು, ಅವರು ಹೃದಯಾಘಾತದಿಂದ ಅಥವಾ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂಬುದಾಗಿ ಅವರ ಸಂಬಂಧಿ ಮಂಜುನಾಥ ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಕಾರ್ಕಳ: ಇಲ್ಲಿನ ಮಾಳ ಗ್ರಾಮದ ಪೇರಡ್ಕ ಎಂಬಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಗೀತಾ (32) ಮೃತರು. ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಮಾಡಿದರೂ ಗುಣಮುಖವಾಗದೇ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಾಡಿನ ಬಿದಿರಿನ ಜಂತಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ತಂದೆ ನಾಣು ಎಂಬವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೆಟ್ರೋಲ್ ಪಂಪ್ನಲ್ಲಿ ಕಳವು
ಉಪ್ಪಿನಂಗಡಿ: ಇಲ್ಲಿನ ರಾ.ಹೆ. 75ರಲ್ಲಿನ ಶ್ರೀ ವಿದ್ಯಾ ಪೆಟ್ರೋಲ್ ಪಂಪ್ಗೆ ಕಳ್ಳರು ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದ ಬಗ್ಗೆ ವರದಿಯಾಗಿದೆ. ಪೆಟ್ರೋಲ್ ಪಂಪ್ನ ರೋಲಿಂಗ್ ಶಟರ್ ಮುರಿದು ಒಳ ನುಗ್ಗಿರುವ ಕಳ್ಳರು, ಕಚೇರಿಯೊಳಗಿನ ಕಪಾಟುಗಳನ್ನು ಜಾಲಾಡಿ ಕೈಗೆ ಸಿಕ್ಕಿದ ಮೊಬೈಲ್ ಫೋನ್, ಟಾರ್ಚ್, ಒಂದಷ್ಟು ಚಿಲ್ಲರೆ ಹಣವನ್ನು ದೋಚಿದ್ದಾರೆ. ಪ್ರಕರಣದ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ.
ಬೆಂಕಿ ಆಕಸ್ಮಿಕದ ಗಾಯಾಳು ಮಹಿಳೆ ಸಾವು
ಉಡುಪಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆ ಮೃತಪಟ್ಟ ಘಟನೆ ಇಲ್ಲಿನ ಕುತ್ಯಾರು ಗ್ರಾಮದ ಪಡ್ಡಾಯಿಗುಡ್ಡೆ ಎಂಬಲ್ಲಿ ನಡೆದಿದೆ. ಸರೋಜ (35) ಮೃತರು. ಅವರು ಮನೆಯಲ್ಲಿ ಅಡುಗೆ ಮಾಡಲು ಒಲೆಗೆ ಬೆಂಕಿ ಉರಿಸಲು ಕ್ಯಾನ್ನಿಂದ ಸೀಮೆಎಣ್ಣೆ ಸುರಿಯುತ್ತಿದ್ದಾಗ ಬೆಂಕಿ ಜೋರಾಗಿ ಹೊರಗೆ ಚಾಚಿ ಅವರು ಧರಿಸಿದ್ದ ನೈಟಿಗೆ ತಗಲಿ ತೀವ್ರವಾಗಿ ಸುಟ್ಟ ಗಾಯಗೊಂಡರು. ತಕ್ಷಣ ಬೊಬ್ಬೆ ಹೊಡೆದ ಅವರನ್ನು ಮನೆಯವರಾದ ಭೋಜರಾಜ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸರೋಜ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ. ಗೋವಿಂದ ಕುಲಾಲ್ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಹೆಬ್ರಿ: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ವಿಷ ಸೇವಿಸಿ ಮೃತಪಟ್ಟ ಘಟನೆ ಕಾರ್ಕಳದ ಚಾರ ಗ್ರಾಮದ ಸಿರಿಯಾರ ಮಕ್ಕಿ ಎಂಬಲ್ಲಿ ಮಂಗಳವಾರ ನಡೆದಿದೆ. ಮೂರ್ತಿಯಮ್ಮ (31) ಮೃತರು. ಅವರು ಅವಿವಾಹಿತೆಯಾಗಿದ್ದು ತನ್ನ ಬುದ್ಧಿಮಾಂದ್ಯ ತಮ್ಮ ವಾದಿರಾಜ ಶೆಟ್ಟಿ ಅವರೊಂದಿಗೆ ವಾಸವಾಗಿದ್ದರು. ಮೂರ್ತಿಯಮ್ಮ ಅವರ ಇನ್ನೊಬ್ಬ ತಮ್ಮ ಚಂದ್ರಪ್ಪ ಎಂಬವನಿಗೂ ಅನಾರೋಗ್ಯ ಉಂಟಾಗಿದ್ದು, ಇದೇ ಕಾರಣಕ್ಕೆ ಮೂರ್ಚಿಯಮ್ಮ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳವಾರ ಮನೆ ಸಮೀಪದ ಹಾಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಸಹೋದರಿ ಹನುಮಂತಿ ಎಂಬವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಂದೂಕು ಅಕ್ರಮ ತಯಾರಿ; ವ್ಯಕ್ತಿ ಸೆರೆ
ಹೆಬ್ರಿ: ಇಲ್ಲಿನ ಕುಚ್ಚೂರು ಗ್ರಾಮದ ಕಾನ್ಬೆಟ್ಟು ಎಂಬಲ್ಲಿ ಬಂದೂಕು ಅಕ್ರಮ ತಯಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಖಚಿತ ಮಾಹಿತಿ ಪಡೆದ ಪೊಲೀಸರು ನಾರಾಯಣ ಆಚಾರ್ಯ ಎಂಬವರ ಮನೆಗೆ ದಾಳಿ ನಡೆಸಿದ್ದು, ಅವರು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಬಂದೂಕು ತಯಾರು ಮಾಡುತ್ತಿರುವುದು ಪತ್ತೆಯಾಗಿದೆ. ಅಲ್ಲದೆ ಅಲ್ಲಿ 2 ಮಸಿ ಲೋಡು ನಾಡಕೋವಿ, ವಿದ್ಯುತ್, ಬ್ಲೋವರ್ ಪಂಪು, ಮರದ ಕೆಲಸಕ್ಕೆ ಬಳಸುತುವ ಹತಾರಿಗಳು, ಕಬ್ಬಿಣದ ಕೆಲಸ ಮಾಡುವ ಹತಾರಿಗಳು, ಕೋವಿ ನಿರ್ಮಾಣ ಹಂತದಲ್ಲಿರುವ 2 ನಳಿಗೆಗಳು ಇತ್ಯಾದಿಗಳು ಪತ್ತೆಯಾಗಿವೆ. ಈ ಸಾಮಾಗ್ರಿಗಳನ್ನು ಮತ್ತುಆರೋಪಿ ನಾರಾಯಣ ಆಚಾರ್ಯರನ್ನು ವಶಕ್ಕೆ ತೆಗೆದುಕೊಂಡಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.