ಸುಳ್ಯ: ಬಾವಿಗೆ ಹಾರಿದ ಮಹಿಳೆಯ ರಕ್ಷಣೆ
ಸುಳ್ಯ: ಕಾಯರ್ತೋಡಿ- ವಿಷ್ಣು ಸರ್ಕಲ್ ರಸ್ತೆ ಸಮೀಪದ ನಿವಾಸಿ ಮಹಿಳೆಯೋರ್ವರು ಬಾವಿಗೆ ಹಾರಿದ ಮತ್ತು ಅಗ್ನಿಶಾಮಕ ದಳದವರು ಕಾರ್ಯಾಚರಣೆಯಿಂದ ಮಹಿಳೆಯನ್ನು ರಕ್ಷಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ. ಸುಳ್ಯದ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಮಹಿಳೆ ಮುಂಜಾನೆ 2 ಗಂಟೆಯ ವೇಳೆಗೆ ಬಾವಿಗೆ ಹಾರಿದರೆನ್ನಲಾಗಿದೆ. ವಿಷಯ ಗೊತ್ತಾಗಿ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಕಾರ್ಯಾಚರಣೆ ನಡೆಸಿ 4.15ರ ವೇಳೆಗೆ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು. ಮಹಿಳೆಯ ಕೈಗೆ ಗಾಯವಾಗಿದೆ. 70 ಅಡಿ ಆಳದ ಬಾವಿ ಇದಾಗಿದ್ದು, ಮಹಿಳೆ ಸುರಕ್ಷಿತವಾಗಿ ರಕ್ಷಣೆಯಾಗಿರುವುದು ವಿಶೇಷ.