ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ಔಷಧೀಯ ಗುಣಗಳ ಘೋಷಣೆ ಅಗತ್ಯ; ಕೊಂಕೋಡಿ

Lingaraj Badiger
Updated On : 28 Mar 2013, 10:46 am

ವಿಟ್ಲ: ಅಡಕೆಯಲ್ಲಿ ಔಷಧೀಯ ಗುಣವಿದ್ದು ಇದನ್ನು ಪ್ರಪಂಚದಾದ್ಯಂತ ಘೋಷಣೆ ಮಾಡುವ ಅಗತ್ಯವಿದೆ. ಅಧಿಕಾರಿಗಳು, ವಿಜ್ಞಾನಿಗಳು ಮತ್ತು ರೈತರ ನಡುವಿನ ಹೊಂದಾಣಿಕೆ ಕೊರತೆಯಿಂದ ಈ ಮಾಹಿತಿ ಪ್ರಸರಣದಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಟ್ಲ ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ 2001 ಜನ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಕೊರತೆ: ದೇಶಕ್ಕೆ 9 ತಿಂಗಳ ಅವಧಿಯಲ್ಲಿ 6 ಲಕ್ಷ ಟನ್ ಅಡಕೆ ಹೊರದೇಶದಿಂದ ಕೆ.ಜಿ.ಗೆ ರು. 75ರಂತೆ ಆಮದಾಗುತ್ತಿದ್ದು ಇದನ್ನು ಪತ್ತೆ ಹಚ್ಚಲು ಡಿಎನ್‌ಎ ಮ್ಯಾಪಿಂಗ್ ಪರೀಕ್ಷೆಯಿಂದ ಸಾಧ್ಯ. ಆದರೆ ಅಗತ್ಯ ಅತ್ಯಾಧುನಿಕ ತಂತ್ರಜ್ಞಾನದ ಕೊರತೆ ನಮ್ಮಲ್ಲಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ರೈತರ ಹತ್ತಿರಕ್ಕೆ ವಿಜ್ಞಾನಿಗಳು ಬಂದು ಪರಿಹಾರ ನೀಡುವ ಕಾರ್ಯ ಮಾಡುವ ಅಗತ್ಯ ಇದೆ ಎಂದರು. ಬೆಂಗಳೂರು ತೋಟಗಾರಿಕಾ ಇಲಾಖೆಯ ಹೆಚ್ಚುವರಿ ತೋಟಗಾರಿಕಾ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಪಿ.ಎಲ್.ಸರೋಜ್, ಮಂಜೇಶ್ವರ ಪ್ರಗತಿಪರ ಕೃಷಿಕ ಡಾ. ಡಿ ಸಿ ಚೌಟ, ಭಾರತೀಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಇದ್ದರು. ವಿಟ್ಲ ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ. ಕೆ.ಎಸ್.ಆನಂದ ಸ್ವಾಗತಿಸಿದರು. ಕಾಸರಗೋಡು ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಜೋರ್ಜ್ ವಿ.ಥೋಮಸ್ ಕಾರ್ಯಕ್ರಮದ ಪರಿಚಯ ಮಾಡಿದರು. ವಿಟ್ಲ ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರ. ವಿಜ್ಞಾನಿ ಡಾ. ಸಿ ಟಿ ಜೋಸ್ ವಂದಿಸಿದರು. ವಿಜ್ಞಾನಿ ನಾಗರಾಜ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement