ಇನ್ಸ್ಪೆಕ್ಟರ್ ವಿರುದ್ಧವೇ ಹಣ ವಸೂಲಿ ಆರೋಪ ಮಾಡಿದ್ದ ಕಳವು ಆರೋಪಿ
ಮಂಗಳೂರು: ಪೊಲೀಸ್ ಮಾಹಿತಿದಾರ ಮತ್ತು ಕಳ್ಳತನ ಆರೋಪಿ ಮುನೀರ್, ಅಂದಿನ ಬಂದರು ಇನ್ಸ್ಪೆಕ್ಟರ್ ವಿನಯ ಗಾಂವ್ಕರ್ ತನ್ನನ್ನು ಎನ್ಕೌಂಟರ್ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದ!
2011 ನವೆಂಬರ್ 30ರಂದು ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರ ಮುಂದೆ ಪೊಲೀಸ್ ಕಿರುಕುಳದ ಕತೆ ಕಟ್ಟಿದ್ದ ಮುನೀರ್, ತಾನು ಬಂದರು ಇನ್ಸ್ಪೆಕ್ಟರ್ ಗಾಂವ್ಕರ್ಗೆ 14 ತಿಂಗಳಿಂದ ಮಾಹಿತಿದಾರನಾಗಿದ್ದೆ. ಸುಮಾರು 38 ಲಕ್ಷ ಮಾಮೂಲಿ ವಸೂಲಿ ಮಾಡಿ ನೀಡಿದ್ದೆ. ಎಸಿಪಿಯಾಗಿ ಗಡಾದಿ ಅಧಿಕಾರ ಸ್ವೀಕರಿಸಿದ ಬಳಿಕ ಅವರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ಸಿಟ್ಟಿಗೆದ್ದ ಗಾಂವ್ಕರ್ ಎನ್ಕೌಂಟರ್ ಮಾಡುವ ಬೆದರಿಕೆ ಒಡ್ಡಿದ್ದರು ಎಂದರು ಆರೋಪಿಸಿದ್ದ. ಬಳಿಕ ಈ ಬಗ್ಗೆ ಐಜಿಪಿ ತನಿಖೆಗೆ ಆದೇಶಿಸಿದ್ದರು. ಕೇಂದ್ರ ಸ್ಥಾನೀಯ ಡಿವೈಎಸ್ ಪಿ ಹರಿಶ್ಚಂದ್ರ ವಿಚಾರಣೆ ನಡೆಸಿದ್ದು, ಆರೋಪಿಸಿದ ಮುನೀರ್ ಬಂದಿರಲೇ ಇಲ್ಲ. ಬಳಿಕ ದೂರುದಾರನೇ ಹಾಜರಾಗದ ಕಾರಣ ತನಿಖೆ ಬಿದ್ದುಹೋಗಿತ್ತು. ಕೊನೆಗೆ ಸುಳ್ಳು ಆರೋಪ ಎಂದು ಪ್ರಕರಣ ಬಿದ್ದುಹೋಗಿತ್ತು. ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದ ಪರಿಣಾಮ ಕೆಲ ಪೊಲೀಸರು ತನಿಖೆ ಎದುರಿಸುವಂತಾಗಿತ್ತು. ಕಳ್ಳರ ಮಾತು ಕೇಳಿ ಪೊಲೀಸರ ಮೇಲೆಯೇ ಆಯೋಗದವರು ಏರಿ ಬಂದಿದ್ದರು ಎನ್ನುತ್ತಾರೆ ಪೊಲೀಸರು. ಇದೀಗ ಮುನೀರ್ 27 ಕಳವು ಪ್ರಕರಣಗಳ ಆರೋಪಿ ಎಂಬುದು ಗೊತ್ತಾಗಿದೆ. ಇಬ್ರಾಹಿಂ ಜತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡುತ್ತಿರುವುದು ಕದ್ರಿ ಪೊಲೀಸರ ಕಾರ್ಯಾಚರಣೆಯಿಂದ ಬಹಿರಂಗವಾಗಿದೆ.