ಕಡಬ ಮೆಸ್ಕಾಂ ಎಇ ಲೋಕಾ ಬಲೆಗೆ
ಉಪ್ಪಿನಂಗಡಿ: ಅಕ್ರಮ ಸಂಪರ್ಕಕ್ಕೆ ವಿಧಿಸಲಾದ ದಂಡವನ್ನು ಮನ್ನಾ ಮಾಡಲು ಲಂಚ ಪಡೆಯುತ್ತಿದ್ದ ಕಡಬ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮೆಸ್ಕಾಂ ಕಡಬ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನಾರಾಯಣ ಬಿ.ಎಚ್. ಬೋವಿ ಬಂಧಿತರು. ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯ ಅಂಜೇರಿ ಜೋಸ್ ಎಂಬವರಿಂದ ರು. 3500 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯ ಅಂಜೇರಿ ಜೋಸ್ ತನ್ನ ಹೊಸ ಮನೆ ನಿರ್ಮಾಣವಾಗುತ್ತಿರುವ ವೇಳೆ ತಾತ್ಕಲಿಕವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಬಳಿಕ ಅದನ್ನು ಕಡಿತಗೊಳಿಸಿ, ತನ್ನ ಹಳೆ ಮನೆಯಿಂದಲೇ ಸಂಪರ್ಕ ಪಡೆದಿದ್ದರು. ಇದನ್ನು ಪತ್ತೆ ಹಚ್ಚಿದ ಎ.ಇ., ಇದಕ್ಕೆ ರು. 38 ಸಾವಿರ ದಂಡ ವಿಧಿಸಲಾಗುವುದು, ರು. 4000 ಲಂಚ ನೀಡಿದರೆ ದಂಡ ವಿಧಿಸುವುದಿಲ್ಲ ಎಂದಿದ್ದರೆನ್ನಲಾಗಿದೆ.
ಈ ಬಗ್ಗೆ ಮಾತುಕತೆ ನಡೆಸಿ ರು. 3500 ಲಂಚ ನೀಡಲು ಅಂಜೇರಿ ಜೋಸ್ ಒಪ್ಪಿದ್ದರು. ಬಳಿಕ ಈ ವಿಚಾರವನ್ನು ಅವರು ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದರು. ಲೋಕಾಯುಕ್ತ ಅಧಿಕಾರಿಗಳು ಕಾರ್ಯತಂತ್ರ ರೂಪಿಸಿ ಬುಧವಾರ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿಠಲ ದಾಸ್ ಪೈ, ಇನ್ಸ್ಪೆಕ್ಟರ್ ಉಮೇಶ್ ಜಿ. ಶೇಟ್ ಭಾಗವಹಿಸಿದ್ದರು.