ದ.ಕ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆಗೆ ಮಾಹಿತಿ ಹಕ್ಕು ಕಾರ್ಯಕರ್ತ ಇಮೇಲ್
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕಳೆದ 3 ವರ್ಷ ಹಾಗೂ ಅಧಿಕೂ ಅಧಿಕ ಸಮಯದಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಪಟ್ಟಿಯನ್ನು ವರ್ಗಾವಣೆ ದೃಷ್ಟಿಯಿಂದ ಕಳುಹಿಸಿ ಎಂದರೆ ಜಿಲ್ಲಾಡಳಿತ ರವಾನಿಸಿದ್ದು ಕಂದಾಯ ಇಲಾಖಾ ಅಧಿಕಾರಿಗಳ ಪಟ್ಟಿ ಮಾತ್ರ. ಇದನ್ನು ತಿಳಿದ ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಇತರೆ ಇಲಾಖೆಗಳಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳ ಪಟ್ಟಿ ಮಾಡಿ ಬೆಂಗಳೂರಲ್ಲಿರುವ ಭಾರತೀಯ ಚುನಾವಣಾ ಆಯೋಗಕ್ಕೆ ಇ-ಮೇಲ್ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ ಘೋಷಣೆಯಾದಾಗ 3 ವರ್ಷದಿಂದ ಜಿಲ್ಲೆಯಲ್ಲಿರುವ ಎಲ್ಲ ಅಧಿಕಾರಿಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಭಾರತೀಯ ಚುನಾವಣಾ ಆಯೋಗ ಸೂಚನೆ ರವಾನಿಸಿತ್ತು. ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಗ್ರೇಡ್-1 ಹುದ್ದೆಯಲ್ಲಿರುವ ಅಧಿಕಾರಿಗಳ ಪಟ್ಟಿ ಮಾಡಿ ಜಿಲ್ಲಾಡಳಿತ ಆಯೋಗಕ್ಕೆ ಕಳುಹಿಸಿಕೊಟ್ಟಿತು. ಆದರೆ ಇತರೆ ಇಲಾಖೆಗಳ ಅಧಿಕಾರಿಗಳ ಪಟ್ಟಿಯನ್ನು ಕಳುಹಿಸಲೇ ಇಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಆಯೋಗ ಕೇವಲ ಕಂದಾಯ ಅಧಿಕಾರಿಗಳ ಪಟ್ಟಿಯನ್ನು ಮಾತ್ರ ಕೇಳಿದ್ದಾಗಿ ಹೇಳಿ ಜಿಲ್ಲಾಡಳಿತ ಕೈತೊಳೆದುಕೊಂಡಿತು.
ಅಧಿಕಾರಿಗಳ ಬುದ್ಧಿವಂತಿಕೆ: ಪಟ್ಟಿ ಸಿದ್ಧಪಡಿಸುವಲ್ಲೂ ಇತರೆ ಇಲಾಖೆಯ ಅಧಿಕಾರಿಗಳು ತಮ್ಮ ಚಮತ್ಕಾರ ತೋರಿಸಿದ್ದಾರೆ. ಜಿಲ್ಲೆಯಲ್ಲಿ ಎರಡು ವರ್ಷ ಬೇರೆ ಕಡೆ ಕರ್ತವ್ಯ ನಿರ್ವಹಿಸಿ ಈ ವರ್ಷ ಕೇಂದ್ರ ಸ್ಥಾನಕ್ಕೆ ವರ್ಗಾವಣೆಯಾಗಿದ್ದರೆ, ತನಗೆ ವರ್ಗವಾಗಿ ಒಂದು ವರ್ಷವಷ್ಟೇ ಆಗಿದ್ದಾಗಿ ಸಬೂಬು ಹೇಳಿ ರಂಗೋಲಿಯಡಿ ನುಸುಳುವ ಯತ್ನ ಮಾಡಿದ್ದಾರೆ.
ಜಿಲ್ಲಾ ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆಯಲ್ಲಿ ಗ್ರೇಡ್-1 ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ, ತಮ್ಮ ತಮ್ಮ ಹೆಸರನ್ನೇ ಬಿಟ್ಟುಬಿಟ್ಟಿದ್ದಾರೆ.
ಆಯೋಗಕ್ಕೆ ಇ-ಮೇಲ್ ರವಾನೆ: ಈ ಬಗ್ಗೆ ನಗರದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಅಧಿಕಾರಿಗಳ ಕರಾಮತ್ತು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ, ಜಿ.ಪಂ ಮುಖ್ಯ ಯೋಜನಾಧಿಕಾರಿ, ಉಪ ಕಾರ್ಯದರ್ಶಿ, ತರಬೇತಿ ಪ್ರಾಂಶುಪಾಲರು, ಸಹ ಕಾರ್ಯದರ್ಶಿ ಸಹಿತ 6 ಮಂದಿ ಹೆಸರನ್ನು ನೇರವಾಗಿ ಮುಖ್ಯ ಚುನಾವಣಾ ಆಯುಕ್ತರಿಗೆ ಇ-ಮೇಲ್ನಲ್ಲಿ ರವಾನಿಸಿದ್ದಾರೆ.