ಆಲೆಟ್ಟಿ ಪ್ರಮಾಣ ಪ್ರಕರಣ: ದೈವಸ್ಥಾನದಲ್ಲಿ ತಪ್ಪು ಕಾಣಿಕೆ
ಸುಳ್ಯ: ಆಲೆಟ್ಟಿ- ಬಡ್ಡಡ್ಕ ಜಿಲ್ಲಾ ಪಂಚಾಯಿತಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವ ಕುರಿತಂತೆ ಎರಡು ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರ ಮಧ್ಯೆ ಏರ್ಪಟ್ಟ ವಿವಾದ ಕುಡೆಕಲ್ಲು ದೈವಸ್ಥಾನದಲ್ಲಿ ತಪ್ಪು ಕಾಣಿಕೆ ಹಾಕುವ ಮೂಲಕ ಇತ್ಯರ್ಥಗೊಂಡಿದೆ.
ಚುನಾವಣೆ ಘೋಷಣೆ ಆದ ಬಳಿಕ ವರ್ಕ್ ಆರ್ಡರ್ ಆಗದೇ ರಸ್ತೆ ಕಾಮಗಾರಿ ಆರಂಭಿಸಿದ ಬಗ್ಗೆ ಚುನಾವಣಾಧಿಕಾರಿಗೆ ಮಾಹಿತಿ ಹೋಗಿ ಅದೇ ದಿನ ಕಾಮಗಾರಿ ಸ್ಥಗಿತವಾಗಿತ್ತು.
ಕಾಂಗ್ರೆಸ್ ಮುಖಂಡರ ದೂರಿನಿಂದಾಗಿ ಕಾಮಗಾರಿ ಸ್ಥಗಿತವಾಗಿರುವ ಕುರಿತು ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ವಿವಾದ ಸತ್ಯ ಪ್ರಮಾಣ ಮಾಡುವವರೆಗೆ ಮುಂದುವರಿದಿತ್ತು.
ಕುಡೆಕಲ್ಲು ಮಹಾವಿಷ್ಣು ದೈವಸ್ಥಾನದಲ್ಲಿ ಆಡಳಿತ ಮೊಕ್ತೇಸರ ವಾಸುದೇವ ಗೌಡ ಕುಡೆಕಲ್ಲು ನೇತೃತ್ವದಲ್ಲಿ ರಾಜಿ ಪಂಚಾಯಿತಿಕೆ ನಡೆದು ತಾಲೂಕು ಪಂಚಾಯಿತಿ ಸದಸ್ಯ ಬಿಜೆಪಿಯ ಜಯಪ್ರಕಾಶ್ ಕುಂಚಡ್ಕ ಮತ್ತು ಕಾಂಗ್ರೆಸ್ ಮುಖಂಡ ಸತ್ಯಕುಮಾರ್ ಅಡಿಂಜ ಹಾಗೂ ಎರಡೂ ಕಡೆಯ ಜನರು ಸತ್ಯ ಪ್ರಮಾಣದ ಬದಲು ಎರಡೂ ಕಡೆಯವರು ತಲಾ ರು. 101 ತಪ್ಪು ಕಾಣಿಕೆ ಹಾಕಿದ್ದು, ವಿವಾದ ಇತ್ಯರ್ಥಪಡಿಸಲಾಯಿತು.
ಜಿ.ಪಂ. ಸದಸ್ಯ ನವೀನ್ ಕುಮಾರ್ ಮೇನಾಲ, ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಕೊಯಿಂಗಾಜೆ, ನವೀನ್ ಗುಂಡ್ಯ ಇದ್ದರು.
ಈ ವಿವಾದಗಳ ನಡುವೆ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ಮತ್ತೆ ಆರಂಭವಾಗಿದೆ.