ಎಂಡೋ ಸಂತ್ರಸ್ತರ ಬೇಡಿಕೆ ಪ್ರಣಾಳಿಕೆಗೆ ಸೇರಿಸಲು ಆಗ್ರಹ
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಇದುವರೆಗೆ ಸರ್ಕಾರದಿಂದ ನ್ಯಾಯಯುತ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಎಂಡೋ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸುವಂತೆ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಶ್ರೀಧರ ಗೌಡ, ಆರೋಗ್ಯ ಇಲಾಖೆ ನಡೆಸಿದ ವೈದ್ಯಕೀಯ ಶಿಬಿರದಲ್ಲಿ 1907 ಮಂದಿ ಎಂಡೋ ಸಂತ್ರಸ್ತರೆಂದು ಪಟ್ಟಿ ಮಾಡಲಾಗಿದೆ. ಉಳಿದವರು ಎಂಡೋ ಪೀಡಿತರಲ್ಲ ಎನ್ನುವುದಕ್ಕೆ ಕಾರಣ ನೀಡಿಲ್ಲ ಎಂದರು.
ಆರೋಗ್ಯ ಇಲಾಖೆಯು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಎಂಡೋ ಸಂತ್ರಸ್ತರಿಗೆ ಸ್ಮಾರ್ಟ್ಕಾರ್ಡ್, ಆ್ಯಂಬುಲೆನ್ಸ್, ಸಂಚಾರಿ ಆಸ್ಪತ್ರೆ ಮುಂತಾದ ಸೌಲಭ್ಯ ನೀಡುವುದಾಗಿ ವಾಗ್ದಾನ ಮಾಡಿ 8 ತಿಂಗಳು ಕಳೆದರೂ ಇದುವರೆಗೆ ಅನುಷ್ಠಾನವಾಗಿಲ್ಲ. ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್ ಮತ್ತು ವಂಶವಾಹಿನಿ ಪರೀಕ್ಷೆಗಳ ಕುರಿತು ಅಧಿಕಾರಿಗಳು ಮಾತಾಡುತ್ತಿಲ್ಲ ಎಂದು ತಿಳಿಸಿದರು.
ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ 3.5 ಎಕರೆ ಮತ್ತು ರು. 3 ಕೋಟಿ ಮಂಜೂರು ಮಾಡಿದರೂ ಕಂದಾಯ ಇಲಾಖೆ ಸ್ಥಳ ನೀಡದೆ ಅನ್ಯಾಯ ಮಾಡುತ್ತಿದೆ. ಅದೇ ರೀತಿ ಕೊಕ್ಕಡ, ಪಟ್ರಮೆ, ನಿಡ್ಲೆ ಗ್ರಾಮಗಳ ಸುಮಾರು 34 ಸಂತ್ರಸ್ತರಿಗೆ ಮಾಸಾಶನ ಮಂಜೂರಾತಿ ಆದೇಶ ನೀಡದೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಬಜೆಟ್ನಲ್ಲಿ ಮೀಸಲಿಟ್ಟ ರು. 2 ಕೋಟಿಯಲ್ಲಿ 2 ಪಾಲನಾ ಕೇಂದ್ರಕ್ಕೆ ಕಟ್ಟಡ ನಿರ್ಮಿಸಬೇಕು. 1982ರಿಂದ 2000 ರವರೆಗೆ ಎಂಡೋ ಸಿಂಪಡಣೆ ವೇಳೆ ಗೇರು ನಿಗಮದ ಅಧ್ಯಕ್ಷರಾಗಿದ್ದವರು ಈ ಬಗ್ಗೆ ಯಾಕೆ ಮೌನವಿದ್ದಾರೆ ಎಂದು ಪ್ರಶ್ನಿಸಿದರು.
ಎಂಡೋ ಸಂತ್ರಸ್ತರಿಗೆ, ಕುಟುಂಬಕ್ಕೆ ಉಚಿತ ಬಸ್ಪಾಸ್ ನೀಡಬೇಕು. ಅಂಗವಿಕಲರಿಗೆ ಸಲಕರಣೆ ಮತ್ತು ನಿರಂತರ ಕೌಶಲ್ಯವೃದ್ಧಿಗೆ ತರಬೇತಿ, ಸಂತ್ರಸ್ತರ ಆಯ್ಕೆ, ಪುನರ್ವಸತಿ, ಪರಿಹಾರಕ್ಕೆ ತಜ್ಞರ ಸಲಹಾ ಸಮಿತಿ ರಚಿಸಬೇಕು. ಈ ಎಲ್ಲ ಬೇಡಿಕೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.
ಜಮಾತೆ ಇಸ್ಲಾಮಿ ಹಿಂದ್ನ ಯೂತ್ವಿಂಗ್ ಜಿಲ್ಲಾಧ್ಯಕ್ಷ ಮಹಮ್ಮದ್ ಮುಹ್ಸಿನ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ರಮೇಶ್ ಹಾಜರಿದ್ದರು.