ಪತಿ ನಿಗೂಢ ನಾಪತ್ತೆ: ಉಪ್ಪಿನಂಗಡಿ ಠಾಣೆಗೆ ಪತ್ನಿ ದೂರು
ಉಪ್ಪಿನಂಗಡಿ: ತನ್ನ ಪತಿ ನಿಗೂಢವಾಗಿ ನಾಪತ್ತೆಯಾಗಿದ್ದು, ಆತನನ್ನ ಪತ್ತೆಹಚ್ಚಿಕೊಡಬೇಕು ಎಂದು ಪತ್ನಿ, ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ತಾಯಿಯನ್ನು ನೋಡಿಕೊಂಡು ಬರುವುದಾಗಿ ಹೇಳಿ ಹೋದ ಪತಿ ಬಳಿಕ ನಾಪತ್ತೆಯಾಗಿರುವುದಲ್ಲದೆ, ಪೊಲೀಸರಿಗೆ ದೂರು ನೀಡಲು ಹೋಗುವ ಸಂದರ್ಭದಲ್ಲೆಲ್ಲ ಕಾಯಿನ್ ಬಾಕ್ಸ್ನಿಂದ ಫೋನಾಯಿಸಿ 2 ದಿನ, 4 ದಿನ ಬಿಟ್ಟು ಬರುತ್ತೇನೆಂದು ತಿಳಿಸುತ್ತಾ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಹಾಗಾಗಿ ತನ್ನ ಪತಿಯನ್ನು ಪತ್ತೆಹಚ್ಚಿ ಕೊಡಬೇಕೆಂದು ಇಲ್ಲಿನ ಗೀತಾ (26) ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿನ ಜನಾರ್ದನ ಗೌಡ ಎಂಬವರ ಮಗ ದಿನೇಶ್ ಗೌಡ ಎಂಬಾತನನ್ನು ಕಳೆದ ಒಂದುವರೆ ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿರುವ ಗೀತಾ ಈಗ ಪುತ್ತೂರಿನ ಕಬಕ ಗ್ರಾಮದ ಮುರ ಎಂಬಲ್ಲಿ ವಾಸವಾಗಿದ್ದಾರೆ. ವಿವಾಹದ ವೇಳೆ ದಿನೇಶ್ ತನ್ನ ಹೆತ್ತವರ ವಿರೋಧವನ್ನು ಲೆಕ್ಕಿಸದೆ ಈಕೆಯನ್ನು ವರಿಸಿದ್ದ.
ಕಳೆದ ಮಾ.3ರಂದು ತನ್ನ ತಾಯಿಯನ್ನು ನೋಡಿ ಬರುತ್ತೇನೆಂದು ಹೋದಾತ ಮನೆಗೆ ಹಿಂತಿರುಗಲಿಲ್ಲವೆಂದೂ, ತಾನು ತನ್ನ ಗಂಡನ ಪತ್ತೆಗಾಗಿ ಪೊಲೀಸ್ ಠಾಣೆಗೆ ಕಾಲಿರಿಸಿದ ದಿನಗಳಂದು ಅವರು ಯಾವುದೋ ಕಾಯಿನ್ ಬಾಕ್ಸ್ನಿಂದ ಪೋನಾಯಿಸಿ 'ನಾನು ಒಂದಷ್ಟು ಒತ್ತಡದಲ್ಲಿದ್ದೇನೆ. 2 ದಿನ ಬಿಟ್ಟು ಮನೆಗೆ ಬರುತ್ತೇನೆ. ಪೊಲೀಸರಿಗೆ ದೂರು ನೀಡಬೇಡ' ಎನ್ನುತ್ತಾರೆ. ಆದರೆ ಮನೆಗೆ ಬರುವುದಾಗಲೀ, ಅವರು ಎಲ್ಲಿರುವುದಾಗಿಯೂ ತಿಳಿಸಿಲ್ಲ. ಅವರ ಮೊಬೈಲ್ ನಂಬ್ರವನ್ನು ಕೂಡ ತಿಳಿಸಿಲ್ಲ. ಇದು ಅವರ ನಾಪತ್ತೆಯನ್ನು ಬಲವಾಗಿ ಸಂಶಯಿಸುವಂತೆ ಮಾಡಿದೆ. ತನ್ನ ಜೊತೆ ಅವರು ವಿವಾಹವಾಗಿರುವುದನ್ನು ಸಹಿಸದ ಮಂದಿ ಅವರನ್ನು ನನ್ನಿಂದ ಬೇರ್ಪಡಿಸಲು ಬಲವಂತವಾಗಿ ಬಂಧಿಸಿಡುವ ಸಾಧ್ಯತೆಯೂ ಇರುವುದರಿಂದ ತನ್ನ ಗಂಡನನ್ನು ರಕ್ಷಿಸಿ, ಪತ್ತೆ ಹಚ್ಚಿಕೊಡಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗೀತಾ ವಿನಂತಿಸಿದ್ದಾರೆ.
ಇತ್ತ ತನ್ನ ಗಂಡನ ರಕ್ಷಣೆ ಹಾಗೂ ಪತ್ತೆಗಾಗಿ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ.