ರಾಜಕೀಯ ಗುರು ರಾಮ ಭಟ್ ಮನೆಗೆ ಡೀವಿ ಭೇಟಿ
ಪುತ್ತೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ಕಸರತ್ತು ಮಾಡುತ್ತಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಗುರುವಾರ ರಾತ್ರಿ ತನ್ನ ರಾಜಕೀಯ ಗುರು, ಮಾಜಿ ಶಾಸಕ ರಾಮ ಭಟ್ ಅವರನ್ನು ದಿಢೀರ್ ಭೇಟಿ ಮಾಡಿದ್ದಾರೆ. ರಾತ್ರಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸದಾನಂದ ಗೌಡ ಅಲ್ಲಿ ಪೂಜೆ ನಡೆಸಿದ ಬಳಿಕ ಕೊಂಬೆಟ್ಟಿನಲ್ಲಿರುವ ರಾಮ ಭಟ್ ಮನೆಗೆ ತೆರಳಿ ರಾಜಕೀಯ ಚರ್ಚೆ ನಡೆಸಿದರು.
ಸಲಹೆ ಪಡೆದಿದ್ದೇನೆ: ಭೇಟಿ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಡೀವಿ, ರಾಜಕೀಯ ಕ್ಲಿಷ್ಟಕರ ಸನ್ನಿವೇಶದಲ್ಲಿ ಗುರುಗಳ ಸಲಹೆ ಪಡೆದಿದ್ದೇನೆ. ರಾಮ ಭಟ್ ಅವರಲ್ಲಿ ರಾಜಕೀಯ ಸ್ಥಿತಿಗತಿಗಳ ಚರ್ಚೆ ನಡೆಸಿದ್ದು, ಈ ಹಿಂದಿನ ಜನಸಂಘದ ಚಿಂತನೆಯ ಮಾದರಿಯಲ್ಲಿ ಆಡಳಿತ ನಡೆಸಲು ರಾಮ ಭಟ್ ಸಲಹೆ ನೀಡಿದ್ದಾರೆ ಎಂದರು.
ತಪ್ಪು ಸರಿಪಡಿಸಿ: ಅಧಿಕಾರದ ಅಮಲಿನಲ್ಲಿ ಕೆಲವೊಂದು ತಪ್ಪುಗಳು ಆಗಿರಬಹುದು. ಅದನ್ನು ಸರಿಪಡಿಸಿಕೊಂಡು ಹೋಗಲು ಭಟ್ ಸಲಹೆ ನೀಡಿದ್ದಾರೆ ಎಂದು ಡೀವಿ ಹೇಳಿದ್ದಾರೆ. ಈ ಭೇಟಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಡೀವಿ ಸ್ಪರ್ಧೆಯ ಮುನ್ಸೂಚನೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.