ವಿಶೇಷ ಮಕ್ಕಳ ಹುಟ್ಟುಹಬ್ಬ ಸಂಭ್ರಮ
ಮಂಗಳೂರು: ದೇಹ ಬೆಳೆದಿದ್ದರೂ ಇವರದು ಮುಗ್ಧ ಮನಸ್ಸು. ವೇದಿಕೆಯಲ್ಲಿ ಪ್ರಶಸ್ತಿ ಪಡೆಯಲು ಹೆಸರನ್ನು ಕೂಗಿದಾಗ ಉಳಿದ ಸಹಪಾಠಿಗಳಿಂದ ಕೇಕೇ, ಚಪ್ಪಾಳೆ.
ಇವರಲ್ಲಿ ಚಿಕ್ಕವರೂ, ದೊಡ್ಡವರೂ ಎಂಬ ಯಾವ ಬೇಧಭಾವ, ಸಣ್ಣತನ ಇರಲಿಲ್ಲ. ಎಲ್ಲರಿಗೂ ಹುಟ್ಟುಹಬ್ಬದ ಸಂತಸ. ಬಣ್ಣ ಬಣ್ಣದ ಬಟ್ಟೆ ಧರಿಸಿ ಚಿಟ್ಟೆಯಂತೆ ಕುಣಿದಾಡುತ್ತಿದ್ದರು.
ತಮ್ಮ ಸಹಪಾಠಿಗಳೊಂದಿಗೆ ತುಂಟಾಟ ಆಡುತ್ತಾ, ಸಿಹಿತಿಂಡಿ ತಿನ್ನುತ್ತಾ ಸಂತೋಷಗೊಂಡಿದ್ದರು. ಇವರೇ ವಿಶೇಷ ಸಾಮರ್ಥ್ಯ ಮಕ್ಕಳು.
ಸುಮಾರು 72 ವಿದ್ಯಾರ್ಥಿಗಳ ಹುಟ್ಟುಹಬ್ಬದ ಸಂಭ್ರಮಕ್ಕೆ ಶುಕ್ರವಾರ ಚೇತನ ಬಾಲವಿಕಾಸ ಕೇಂದ್ರ ವೇದಿಕೆಯಾಗಿತ್ತು.
ಶಿಕ್ಷಕರು ಮಕ್ಕಳಿಗೆ ಆರತಿ ಎತ್ತಿ, ತಿಲಕ ಇಟ್ಟು ಶುಭ ಹಾರೈಸಿ, ಸಿಹಿ ತಿಂಡಿ ತಿನಿಸಿದರು. ಆಸರೆ ಟ್ರಸ್ಟ್ನ ಮೀರಾಭಾಯಿ ಅವರು ಶ್ಲೋಕ ಹೇಳಿ ಮಕ್ಕಳಿಗೆ ಆಶೀರ್ವಾದ ಮಾಡಿದರು. ಎಲ್ಲಾ ಮಕ್ಕಳಿಗೂ ಬ್ಯಾಗ್ ವಿಕತರಿಸಲಾಯಿತು.
ಮಕ್ಕಳ ಸಂಭ್ರಮ ಹಿಮ್ಮಡಿಯಾಗುವಂತೆ ಕುದ್ರೋಳಿ ಗಣೇಶ್ ಅವರು ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಜಾದೂ ಕಾರ್ಯಕ್ರಮ ವೀಕ್ಷಿಸಿದ ಮಕ್ಕಳಲ್ಲಿ ಸಂತಸವೋ ಸಂತಸ. ಕೇಕೆ, ಚಪ್ಪಾಳೆಯಿಂದ ಮುಗ್ಧ ಮನಸ್ಸುಗಳು ತಮ್ಮ ನೋವು ಮರೆತು ಸಂಭ್ರಮಿಸಿದವು. ಮಕ್ಕಳ ಸಂಭ್ರಮ ಕಂಡು ಹೆತ್ತವರ ಕಣ್ಣಂಚಲ್ಲಿ ಖುಷಿಯ ಕಣ್ಣೀರು ಇಣುಕಿದವು.
ಚೇತನಾ ಶಾಲೆಯ ಸಂಸ್ಥಾಪಕಿ ಸುಮಿತ್ರಾ ಅವರ 75ನೇ ಹುಟ್ಟುಹಬ್ಬದ ಸಂಭ್ರಮವೂ ಇಲ್ಲಿ ನಡೆಯಿತು. ಮುಗ್ಧ ಮಕ್ಕಳ ಸಂತೋಷದಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿ ತೃಪ್ತಿಗೊಂಡರು.
ಪ್ರತೀ ವರ್ಷ ಮಕ್ಕಳ ಹುಟ್ಟುಹಬ್ಬ ನಡೆಸಲಾಗುತ್ತದೆ. ಇದರಿಂದ ಹೆತ್ತವರಿಗೂ ನೆಮ್ಮದಿ ಮತ್ತು ಮಕ್ಕಳಿಗೂ ತಮಗೂ ಹಬ್ಬಗಳನ್ನು ಆಚರಿಸುವ ಅವಕಾಶವಿದೆ ಎಂಬ ಮನೋಭಾವದಿಂದ ತಮ್ಮ ನೋವು ಮರೆತು ಖುಷಿ ಪಡುತ್ತಾರೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ.