ಸುಳ್ಯ: ಶತಕ ಹೊಸ್ತಿಲಲ್ಲಿ ಮೊದಲ ಶಾಸಕ ಸಕ್ರಿಯ
ದುರ್ಗಾಕುಮಾರ್ ನಾಯರ್ಕೆರೆ
ಸುಳ್ಯ: ಸುಳ್ಯದ ಮೊದಲ ಶಾಸಕ ಸುಬ್ಬಯ್ಯ ನಾಯ್ಕರು ಶತಾಯುಷ್ಯದ ಹೊಸ್ತಿಲಲ್ಲಿದ್ದಾರೆ. ತಮ್ಮ ಬದುಕಿನ ಇಳಿಸಂಜೆಯ ಹೊತ್ತಿನಲ್ಲೂ ಸಮಾಜದೆಡೆಗೆ ಬೆರಗು ಕಣ್ಣುಗಳಿಂದ ನೋಡುವ ಅಪರೂಪದ ವ್ಯಕ್ತಿತ್ವ ಅವರದು.
ಮೊದಲ ಶಾಸಕ: 1957ರಲ್ಲಿ ಸುಬ್ಬಯ್ಯ ನಾಯ್ಕರು ಮೊದಲ ಬಾರಿಗೆ ಶಾಸಕರಾಗಿದ್ದರು. ಪುತ್ತೂರು ವಿಧಾನಸಭಾ ದ್ವಿಸದಸ್ಯ ಕ್ಷೇತ್ರದಿಂದ ಆಯ್ಕೆಗೊಂಡ ಶಾಸಕರಲ್ಲಿ ಸುಬ್ಬಯ್ಯ ನಾಯ್ಕರೂ ಸೇರಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅವರು 28691 ಮತ ಪಡೆದು ವಿಜಯಿಯಾದರು. 1962ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ ಸುಬ್ಬಯ್ಯ ನಾಯ್ಕರು 12787 ಮತ ಪಡೆದು ಸ್ವತಂತ್ರ ಅಭ್ಯರ್ಥಿ ವೆಂಕಪ್ಪ ನಾಯ್ಕರ ಎದುರು ವಿಜಯಿಯಾದರು.
ಶಾಸಕನಾದ ಶಿಕ್ಷಕ...: ಹೀಗೆ ಹತ್ತು ವರ್ಷ ಶಾಸಕರಾಗಿ ಕೆಲಸ ಮಾಡಿದ ಸುಬ್ಬಯ್ಯ ನಾಯ್ಕರು ಬಳಿಕ ಕ್ಷೇತ್ರದ ಮೀಸಲಾತಿ ಪರಿಶಿಷ್ಟ ಜಾತಿಗೆ ಬದಲಾದುದರಿಂದ ಮತ್ತೆ ಸ್ಪರ್ಧೆ ಸಾಧ್ಯವಾಗಲಿಲ್ಲ.
1957ರಲ್ಲಿ ಚುನಾವಣೆ ನಡೆಯುವ ಸಂಧರ್ಭದಲ್ಲಿ ಸುಬ್ಬಯ್ಯ ನಾಯ್ಕರು ಪಂಜ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಮ್ಮ ಶಿಕ್ಷಕ ವೃತ್ತಿಗೆ ರಾಜಿನಾಮೆ ನೀಡಿ ಚುನಾವಣೆಗೆ ಧುಮುಕಿದ ಅವರು ಮೊದಲ ಯತ್ನದಲ್ಲೇ ವಿಜಯದ ನಗೆ ಬೀರಿದರು.
ಅವರು ಆಗ ಸುಳ್ಯದ ಶಾಸಕರಾಗಿದ್ದರೂ ಇಡೀ ರಾಜ್ಯದ ಪರಿಶಿಷ್ಟ ಪಂಗಡದ ಪ್ರತಿನಿಧಿಯಂತಿದ್ದರು. ಕಾರಣ ವಿಧಾನಸಭೆಯಲ್ಲಿ ಇವರೊಬ್ಬರೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಶಾಸಕರಾಗಿದ್ದರು.
ನಿಜಲಿಂಗಪ್ಪರ ಆಪ್ತ...: ಶಾಸಕತ್ವದ ತಮ್ಮ ಎರಡು ಅವಧಿಗಳಲ್ಲೂ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ ಹಿರಿಮೆ ಅವರದು. ಸುಳ್ಯ ತಾಲೂಕಿನ ರಚನೆ, ಸುಳ್ಯದಲ್ಲಿ ಕೋರ್ಟ್ ಸ್ಥಾಪನೆ, ವಿದ್ಯುದ್ದೀಕರಣ ಯೋಜನೆ, ಸೇತುವೆಗಳ ನಿರ್ಮಾಣ, ದೂರವಾಣಿ ಸೌಲಭ್ಯ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಸುಬ್ಬಯ್ಯ ನಾಯ್ಕರು ಮಾಡಿದರು. ಆಧುನಿಕ ಸುಳ್ಯದ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರೂ ಇವರೊಂದಿಗೆ ಕೈ ಜೋಡಿಸಿದ್ದರು.
ವಿಧಾನಸಭೆಯಲ್ಲಿ ತಮ್ಮ ವಿದ್ವತ್ ಪೂರ್ಣ ಮಾತಿನಿಂದ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಸ್ನೇಹ ಸಂಪಾದಿಸಿ ಅವರ ಆಪ್ತರೂ ಆಗಿದ್ದರು. ಮಾತ್ರವಲ್ಲದೆ ಆಗಿನ ಉಪ ರಾಷ್ಟ್ರಪತಿ ಬಿ.ಡಿ. ಜತ್ತಿ, ಕೇಂದ್ರ ಸಚಿವ ಟಿ.ಎ.ಪೈ ಮೊದಲಾದವರ ಗೌರವವನ್ನೂ ಸಂಪಾದಿಸಿದ್ದರು. ಗೇಣಿದಾರ ರೈತರ ಬವಣೆ, ಭೂ ಸುಧಾರಣೆ, ಜತ್ತಿ ಸಮಿತಿ ವರದಿಯ ಬಗ್ಗೆ, ಗೇಣಿ ಶಾಸನ ತಿದ್ದುಪಡಿ, ರಸ್ತೆ ಸಾರಿಗೆ, ಮಿತವ್ಯಯ ಮತ್ತು ಸಂಪನ್ಮೂಲ, ವೈದ್ಯಕೀಯ ಮತ್ತು ಜನಾರೋಗ್ಯ, ನೀರಾವರಿ ಮಸೂದೆ... ಇವುಗಳ ಕುರಿತೆಲ್ಲ ಸದನದಲ್ಲಿ ಅಧಿಕಾರಯುತವಾಗಿ ಮಾತನಾಡುತ್ತಿದ್ದರು.
ದೂರದೃಷ್ಟಿಯ ರಾಜಕಾರಣಿ...: ಕೃಷಿಕ ಕುಟುಂಬದಿಂದ ಬಂದ ಸುಬ್ಬಯ್ಯ ನಾಯ್ಕರ ಕುಟುಂಬದವರು ಬೇಸಾಯಗಾರರಾದರೂ ಸ್ವಂತ ಭೂಮಿ ಇರಲಿಲ್ಲ.
ಇವರ ಹುಟ್ಟೂರು ಈಗ ಕೇರಳಕ್ಕೆ ಸೇರಿರುವ ಪಾತೂರು ಎಂಬ ಹಳ್ಳಿ. ಶಿಕ್ಷಕನಾಗಬೇಕೆಂಬ ಅವರ ಗುರಿಯಂತೆ ಶಿಕ್ಷಕನಾದ ಬಳಿಕ ಹಿಂದಿ ಮಹಾವಿದ್ಯಾಲಯದಿಂದ ಹಿಂದಿ ವಿಶಾರದ ಪದವಿಯನ್ನೂ ಗಳಿಸಿದರು.
ಸುಬ್ಬಯ್ಯ ನಾಯ್ಕರು ದೂರದೃಷ್ಟಿತ್ವದ ರಾಜಕಾರಣಿಯಾಗಿದ್ದರು ಎಂಬುದಕ್ಕೆ ಅವರು ತಮ್ಮ ಮೊದಲ ಭಾಷಣದಲ್ಲೇ ಬಡಮಕ್ಕಳ ಮಧ್ಯಾಹ್ನದ ಊಟದ ಕುರಿತು ಅಂದೇ ಶಾಸನ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅದೀಗ ಅಕ್ಷರ ದಾಸೋಹವಾಗಿ ಜನಪ್ರಿಯವಾಗಿದೆ.
ರಬ್ಬರ್ ಕೃಷಿಯ ಬಗ್ಗೆ ಸಾಕಷ್ಟು ಬಾರಿ ಶಾಸನ ಸಭೆಯಲ್ಲಿ ಮಾತನಾಡಿದ್ದ ಸುಬ್ಬಯ್ಯ ನಾಯ್ಕರು, ರಬ್ಬರ್ ಕೃಷಿ ಸಾಕಷ್ಟು ಲಾಭದಾಯಕವೆಂದು ಹೇಳುತ್ತಿದ್ದ ಅವರ ಮಾತುಗಳು ಇಂದು ನಿಜವಾಗಿದೆ. ರಬ್ಬರ್ ಬೆಳೆಗಾರರ ಆರ್ಥಿಕ ಶಕ್ತಿ ಸಾಕಷ್ಟು ವೃದ್ಧಿಯಾಗಿದೆ.
ವಿಧಾನಸಭೆಯಲ್ಲಿ ಸಹಾಯಕ ಸಚೇತಕನಾಗಿಯೂ ಸೇವೆ ಸಲ್ಲಿಸಿದ ಸುಬ್ಬಯ್ಯ ನಾಯ್ಕರು ಮೈಸೂರು ರಾಜ್ಯದ ಗಿರಿಜನರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಕರ್ನಾಟಕ ಹರಿಜನ ಗಿರಿಜನ ಗೃಹ ನಿರ್ಮಾಣ ಕಾರ್ಪೊರೇಶನ್ ಚೀಫ್ ಪ್ರಮೋಟರ್ ಆಗಿ, ಮಂಗಳೂರು ವಿವಿ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಅಪ್ಪಟ ಗಾಂಧಿವಾದಿ
ಸುಬ್ಬಯ್ಯ ನಾಯ್ಕರು ಅಪ್ಪಟ ಗಾಂಧಿವಾದಿ. ಸದಾ ಖಾದಿ ಜುಬ್ಬದ ಮೇಲೊಂದು ಕಂದು ಬಣ್ಣದ ಕೋಟು. ತಲೆಯ ಮೇಲೊಂದು ಬಿಳಿಯ ಖಾದಿ ಟೋಪಿ ಹೀಗಿ ಗೌರವಯುತ ವ್ಯಕ್ತಿತ್ವದಿಂದ ಸುಳ್ಯದ ಜನಮಾನಸದಲ್ಲಿ ಜನಜನಿತರಾಗಿದ್ದ ಸುಬ್ಬಯ್ಯ ನಾಯ್ಕರದು ಈಗ ಬದುಕಿನ ಇಳಿಸಂಜೆಯ ಹೊತ್ತು.
ಸುಳ್ಯ ನಗರದ ಜಟ್ಟಿಪ್ಪಳ್ಳದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಅವರಿಗೀಗ 99 ಕಳೆದು ಶತಾಯುಷಿಯಾಗುವ ಹೊತ್ತು. ಈ ಪ್ರಾಯದಲ್ಲೂ ಜೀವನೋತ್ಸಾಹ ಕುಂದಿಲ್ಲ.