ಪಕ್ಷ ಸಂಘಟನಗೆ ಶ್ರಮಿಸಿದವರಿಗೆ ಟಿಕೇಟ್ ನೀಡಿ: ಕಾಂಗ್ರೆಸ್ ಮುಖಂಡರ ಆಗ್ರಹ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ಪಕ್ಷದ ಸಂಘಟನೆಗಾಗಿ ಶ್ರಮಿಸಿದ ಸ್ಥಳೀಯರಿಗೆ ಟಿಕೇಟು ನೀಡಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಹೇಳಿದರು.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿ ಪುತ್ತೂರಿನಲ್ಲಿ ಕಾಂಗ್ರೆಸ್,ಗೆ ಗೆಲ್ಲುವ ಅವಕಾಶಗಳಿದ್ದರೂ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾರಣದಿಂದಾಗಿ ಪಕ್ಷಕ್ಕೆ ಸೋಲಾಗಿದೆ. ಈ ಬಾರಿ ಅದೇ ತಪ್ಪು ಮರುಕಳಿಸಿದಲ್ಲಿ ಪಕ್ಷದ ಕಾರ್ಯಕರ್ತರಿಗೆ ನೋವಾಗುತ್ತದೆ ಎಂದ ಅವರು ಪುತ್ತೂರಿನಲ್ಲಿ ಪಕ್ಷವನ್ನು ಬೆಳೆಸಿದ, ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಿದರೆ ಇಲ್ಲಿ ಪಕ್ಷ ಗೆಲವು ಸಾಧಿಸುವುದು ನಿಶ್ಚಿತ. ಕಾರ್ಯಕರ್ತರಿಗೆ ಪರಿಚಯವೇ ಇಲ್ಲದ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಾಯಕರಾಗಿ ಕಾಣಿಸಿಕೊಳ್ಳುವ ಮತ್ತು ಪಕ್ಷಕ್ಕೆ ಸೇರ್ಪಡೆಯಾಗುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಿದರು.