ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದರೆ ಕ್ರಿಮಿನಲ್ ಅಪರಾಧ: ಡಿಸಿ

Vishwanath S
Updated On : 30 Mar 2013, 11:37 am

ಮಂಗಳೂರು: ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರು ನೋಂದಾಯಿಸಿ ಬೋಗಸ್ ಮತದಾನಕ್ಕೆ ಪ್ರಯತ್ನಿಸುವುದು ಕಂಡುಬಂದರೆ ಕ್ರಿಮಿನಲ್ ಅಪರಾಧವಾಗುತ್ತದೆ. ಇದನ್ನು ಗಂಭೀರ ಪರಿಗಣಿಸಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳೂ ಸೇರಿದಂತೆ ಬೇರೆ ರಾಜ್ಯದಿಂದ ವಲಸೆ ಬಂದವರು ಇಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಭ್ಯಂತರ ಇಲ್ಲ. ಆದರೆ ಅಲ್ಲಿ ಹೆಸರಿದ್ದರೆ ಅದನ್ನು ತೆಗೆಸಬೇಕು ಎಂದರು.
ಯಾವುದಾದರೂ ಒಂದು ಕಡೆ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಇರಬಹುದು. ಅದರ ಬದಲು ಎರಡೂ ಕಡೆ ಹೆಸರು ನೋಂದಾಯಿಸಿ ಖೊಟ್ಟಿ ಮತದಾನಕ್ಕೆ ಯತ್ನಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಂಟ್ರೋಲ್ ರೂಂ ನಂಬರ್ ಮೇಲ್ದರ್ಜೆಗೆ: ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂ ನಂಬರ್ 1077ನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಪ್ರಸಕ್ತ ಕುಂದುಕೊರತೆಗೆ ಮಾತ್ರ ಈ ನಂಬರ್ ಬಳಕೆಯಾಗುತ್ತಿದೆ. ಇನ್ನು ಮುಂದೆ ಜಿಲ್ಲಾಧಿಕಾರಿ ಜತೆ ನೇರವಾಗಿ ಮಾತನಾಡಲು ಸಂಪರ್ಕ ಕಲ್ಪಿಸಲಾಗುವುದು. ಇದಕ್ಕೆ ಪೂರಕವಾಗಿ ಹಲವು ಲೈನ್,ಗಳ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.
 ವಿಧಾನಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮತಗಟ್ಟೆ ಸ್ಥಾಪನೆ, ಭದ್ರತೆ ಸೇರಿದಂತೆ ಅಗತ್ಯ ಕ್ರಮ ಅನುಸರಿಸಲಾಗುವುದು. ನ್ಯಾಯಸಮ್ಮತ ಚುನಾವಣೆಗೆ ಎಲ್ಲರ ಸಹಕಾರ ಅಪೇಕ್ಷಿಸುವುದಾಗಿ ಹೇಳಿದರು.
4 ದೂರು ದಾಖಲು: ನೀತಿ ಸಂಹಿತೆ ಜಾರಿ ಬಳಿಕ ಸುದ್ದಿಗೋಷ್ಠಿ ನಡೆಸಿ ಅಭಿವೃದ್ಧಿಪರ ಮಾತನಾಡಿದ ಮೂಡಾ ಅಧ್ಯಕ್ಷ ರಮೇಶ್ ಹಾಗೂ ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ವಿರುದ್ಧ ದೂರು ದಾಖಲಿಸಲಾಗಿದೆ. ಈ ದೂರನ್ನು ಮುಂದಿನ ಕ್ರಮಕ್ಕೆ ಮಾಧ್ಯಮ ಸಮಿತಿಗೆ ರವಾನಿಸಲಾಗಿದೆ. ಇದೇ ರೀತಿ ಜೈಲಿನಲ್ಲಿ ಟೀ ಶರ್ಟ್ ವಿತರಿಸಿದ ಆರೋಪದ ಮೇಲೆ ಶಾಸಕ ಕೃಷ್ಣಪಾಲೇಮಾರ್ ವಿರುದ್ಧ, ಉಳ್ಳಾಲದಲ್ಲಿ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಲು ಆಮಿಷ ತೋರಿಸಿದ ರಾಜಕೀಯ ಪಕ್ಷವೊಂದರ ವಿರುದ್ಧವೂ ದೂರು ದಾಖಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ದಯಾನಂದ್ ಮಾಹಿತಿ ನೀಡಿದರು.
 ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement