ಅಂಗಡಿಯಿಂದ ನಗದು, ಚಿನ್ನಾಭರಣ ಕಳವು
ಪಡುಬಿದ್ರಿ: ಇಲ್ಲಿಯ ಠಾಣಾ ವ್ಯಾಪ್ತಿಯ ಪಲಿಮಾರಿನ ಅಂಗಡಿಯೊಂದರ ಹಿಂಭಾಗದ ಶಟರ್ ಮುರಿದು ಲಕ್ಷಾಂತರ ನಗದು ಮತ್ತು ಚಿನ್ನಾಭರಣ ಕಳವುಗೈದ ಘಟನೆ ಶುಕ್ರವಾರ ನಡೆದಿದೆ.
ಪಲಿಮಾರು ಪೇಟೆಯ ಮಧ್ಯ ಭಾಗದಲ್ಲಿ ವ್ಯಾಪಾರ ನಡೆಸುತ್ತಿದ್ದ ದಿನೇಶ್ ಪ್ರಭು ಮಾಲೀಕತ್ವದ ಧನಲಕ್ಷ್ಮೀ ಟ್ರೇಡರ್ಸ್ ಅಂಗಡಿಗೆ ಶುಕ್ರವಾರ ರಾತ್ರಿ ಕಳ್ಳರು ಹಿಂಬಾಗಿಲ ಶಟರನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ಅಂಗಡಿಯಲ್ಲಿನ ಬೀರುವನ್ನು ಒಡೆದು ಸುಮಾರು ರು. 1.95 ಲಕ್ಷ ನಗದು ಹಾಗೂ ಸುಮಾರು 15 ಪವನ್ ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.
ನಗರದ ಮಧ್ಯ ಭಾಗದಲ್ಲಿರುವ ಈ ಅಂಗಡಿಯಲ್ಲಿ ಲಕ್ಷಾಂತರ ರುಪಾಯಿ ನಗದು ಇರಬಹುದೆಂಬ ಶಂಕೆ ಸ್ಥಳೀಯರಿಗಿದ್ದ ಪರಿಣಾಮ ಕಳ್ಳತನ ಸಂಭವಿಸಿದೆ ಎಂದು ಮಾಲೀಕ ದಿನೇಶ್ ಪ್ರಭು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮನೆಯಲ್ಲಿ ಶುಕ್ರವಾರ ಶುಭ ಸಮಾರಂಭ ನಡೆದಿದ್ದು, ಚಿನ್ನಾಭರಣವನ್ನು ಶನಿವಾರ ಬೆಳಗ್ಗೆ ಬ್ಯಾಂಕ್ ಲಾಕರ್ನಲ್ಲಿ ಇರಿಸುವಸಲುವಾಗಿ ಅಂಗಡಿಯ ಕಪಾಟಿನಲ್ಲಿ ಇಟ್ಟಿದ್ದೇವೆ. ಇದರ ಬಗ್ಗೆ ಕಳ್ಳರಿಗೆ ಖಚಿತ ಮಾಹಿತಿ ಇದ್ದ ಪರಿಣಾಮ ಕಳ್ಳತನ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಕಾರ್ಕಳ ಡಿ.ವೈ.ಎಸ್ಪಿ ಜಯಂತ ಶೆಟ್ಟಿ, ಕಾಪು ವೃತ್ತ ನಿರೀಕ್ಷಕ ಶಿವಾನಂದ ವಾಲೀಕರ್, ಪಡುಬಿದ್ರಿ ಠಾಣಾಧಿಕಾರಿ ಮಹದೇವ ಶೆಟ್ಟಿ ಹಾಗೂ ಉಡುಪಿಯ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ, ತನಿಖೆ ನಡೆಸಿದ್ದಾರೆ.