ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗದ್ದುಗೆ ಏರುವವರಾರು?

Rashmi Kasaragodu
Updated On : 31 Mar 2013, 1:31 am

ಪ್ರಕಾಶ್ ಮೂಲ್ಕಿ
ಮೂಲ್ಕಿ: ಕಟೀಲು ಕ್ಷೇತ್ರ, ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸಾವಿರ ಕಂಬದ ಬಸದಿ ಮುಂತಾದ ಚಾರಿತ್ರಿಕ ಮಹತ್ವವುಳ್ಳ ಸ್ಥಳಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಮೂಡುಬಿದಿರೆ. 5 ಜಿ.ಪಂ, 19 ತಾಲೂಕು ಪಂಚಾಯತ್, 27 ಗ್ರಾ.ಪಂ., ಮೂಲ್ಕಿ ನಗರ ಪಂಚಾಯತ್ ಹಾಗೂ ಮೂಡುಬಿದಿರೆ ಪುರಸಭೆ ವ್ಯಾಪ್ತಿಯನ್ನು ಹೊಂದಿದ್ದು 2012ರ ಡಿಸೆಂಬರ್ವರೆಗಿನ ಮಾಹಿತಿಯಂತೆ ಸುಮಾರು 1,69,000 ಮತದಾರರನ್ನು ಹೊಂದಿದೆ.
 1951ರಿಂದ 1962ರ ಚುನಾವಣೆಯವರೆಗೆ ಸುರತ್ಕಲ್ ಕ್ಷೇತ್ರದಲ್ಲಿದ್ದ ಮೂಡಬಿದಿರೆ 1967ರ ಬಳಿಕ ಮೂಲ್ಕಿ- ಮೂಡುಬಿದಿರೆ ಕ್ಷೇತ್ರವಾಗಿ ಪರಿವರ್ತನೆಯಾಗಿದ್ದು 2008ರಲ್ಲಿ ಈಗಿನ ಮಂಗಳೂರು ಉತ್ತರ, ಸುರತ್ಕಲ್ ಕ್ಷೇತ್ರದ ಕೆಲವು ಗ್ರಾಮಗಳನ್ನು ಸೇರಿಸಿಕೊಂಡು ಮೂಡಬಿದಿರೆ ಕ್ಷೇತ್ರವಾಗಿ ಪರಿಗಣನೆಯಾಗಿದೆ.
ಮೂಡುಬಿದಿರೆ ಹೋಬಳಿ, ಗುರುಪುರ ಮತ್ತು ವೇಣೂರು ಹೋಬಳಿಯ ಕೆಲವು ಪ್ರದೇಶಗಳನ್ನು ಸೇರಿಸಿ ಮೂಡಬಿದಿರೆ ತಾಲೂಕು ಘೋಷಣೆಯಾಗಿದೆ.
2004ರಲ್ಲಿ ಕ್ಷೇತ್ರದ ಜನಸಂಖ್ಯೆ ಪುರುಷರು 53,035, ಮಹಿಳೆಯರು 61,116 ಸೇರಿದಂತೆ 1,14,151, 2008ರಲ್ಲಿ ಕ್ಷೇತ್ರದ ಜನಸಂಖ್ಯೆ  ಪುರುಷರು 71565, ಮಹಿಳೆಯರು 81267 ಸೇರಿದಂತೆ ಒಟ್ಟು 1,52,832 ಆಗಿದ್ದು 2013ರಲ್ಲಿ ಒಟ್ಟು 169000 ಮತದಾರರಿದ್ದಾರೆ.
ಖಾತೆ ತೆರೆಯದ ಬಿಜೆಪಿ: 1951ರಿಂದ ನಡೆದ ಒಟ್ಟು 13 ಚುನಾವಣೆಯಲ್ಲಿ ಅಂದಿನ ಸಂಸ್ಥಾ ಕಾಂಗ್ರೆಸ್ 2 ಬಾರಿ ಇಂದಿನ ಕಾಂಗ್ರೆಸ್ ಪಕ್ಷ 7 ಬಾರಿ, ಪ್ರಜಾ ಸೋಷಲಿಸ್ಟ್ 1 ಬಾರಿ ಹಾಗೂ ಜನತಾ ಪಕ್ಷ ಮತ್ತು ಜನತಾ ದಳದ ಕೆ.ಅಮರನಾಥ ಶೆಟ್ಟಿಯವರ ವೈಯಕ್ತಿಕ ವರ್ಚಸ್ಸಿನ ಮೇಲೆ 3 ಬಾರಿ ಜಯಗಳಿಸಿದ್ದು ಮೂಡುಬಿದಿರೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಬಿಜೆಪಿ ಇವರೆಗೂ ತನ್ನ ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿದೆ. 1972ರಿಂದ ಕಾಂಗ್ರೆಸ್ ಮತ್ತು ಜನತಾ ಪಕ್ಷದ ನಡುವೆ ನೇರ ಸ್ಪರ್ಧೆ ನಡೆಯುತ್ತಿದ್ದು 2004ರವರೆಗೆ ತೃತೀಯ ಸ್ಥಾನ ಪಡೆಯುತ್ತಿದ್ದ ಬಿಜೆಪಿ 2008ರ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ಜೆಡಿಎಸ್ನ ಕೆ. ಅಮರನಾಥ ಶೆಟ್ಟಿ, ತೃತೀಯ ಸ್ಥಾನ ಪಡೆದಿದ್ದಾರೆ.
 1951ರಿಂದ 1962 ರ ಅವಧಿಯಲ್ಲಿ ಮೂಲ್ಕಿ ಪರಿಸರದ ಡಾ. ಸಂಜೀವನಾಥ ಐಕಳರು 1962ರಲ್ಲಿ ಒಂದು ಬಾರಿ ಆಯ್ಕೆಯಾಗಿದ್ದು,1972ರಲ್ಲಿ ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವಾದ ಬಳಿಕ ಒಟ್ಟು 10 ಚುನಾವಣೆಯಲ್ಲಿ ಮೂಡಬಿದಿರೆ ಪರಿಸರದವರು 7 ಬಾರಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಜೆಡಿಎಸ್ನ ಕೆ. ಅಮರನಾಥ ಶೆಟ್ಟಿ ಮೂರು ಬಾರಿ, ಕಾಂಗ್ರೆಸ್ನ ಕೆ. ಅಭಯಚಂದ್ರ ಜೈನ್ ಮೂರು ಬಾರಿ, ಕಾಂಗ್ರೆಸ್ನ ರತನ್ ಕುಮಾರ್ ಕಟ್ಟೆಮಾರ್ ಒಂದು ಬಾರಿ, ಮೂಲ್ಕಿ ಪರಿಸರವದವರು ಮೂರು ಬಾರಿ ಅದರಲ್ಲಿ ಡಾ. ದಾಮೋದರ ಮೂಲ್ಕಿ ಒಂದು ಬಾರಿ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ಕ್ಷೇತ್ರದಲ್ಲಿ ಶಾಸಕರಾಗಿ ಸಚಿವರಾದವರು ಕೇವಲ ಜೆಡಿಎಸ್ನ ಕೆ. ಅಮರನಾಥ ಶೆಟ್ಟಿ ಹಾಗೂ ಕಾಂಗ್ರೆಸ್ನ ಡಾ. ದಾಮೋದರ ಮೂಲ್ಕಿ. ಡಾ ದಾಮೋದರ ಮೂಲ್ಕಿಯವರು ದೇವರಾಜು ಅರಸು ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದು ಕೇವಲ 15 ದಿನಕ್ಕೆ ಮಂತ್ರಿಯಾಗಿದ್ದು ದೇವರಾಜ ಅರಸರ ಮುಖ್ಯ ಮಂತ್ರಿ ಸ್ಥಾನ ಹೋದ ಬಳಿಕ ಡಾ. ದಾಮೋದರ ಮೂಲ್ಕಿಯವರ ಸಚಿವ ಸ್ಥಾನ ಕೂಡ ಹೋಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement