'ಚುನಾವಣೆಗೆ ಅಗತ್ಯ ಸಿದ್ಧತೆ, ಅಧಿಕಾರಿಗಳಿಗೆ ತರಬೇತಿ'
ಪುತ್ತೂರು: ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿಸುವ ದೃಷ್ಟಿಯಿಂದ ಈಗಾಗಲೇ ವಿವಿಧ ಯೋಜನೆ ರೂಪಿಸಲಾಗಿದ್ದು, ಎಲ್ಲ ರೀತಿಯಿಂದ ಸಿದ್ಧತೆ ನಡೆಸುವುದರೊಂದಿಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ 10 ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಒಬ್ಬರಂತೆ ಸೆಕ್ಟರ್ ಆಫೀಸರ್ ನೇಮಿಸಲಾಗುವುದು. ಪ್ರತಿ 6ರಿಂದ 7 ಸೆಕ್ಟರ್ ಆಫೀಸರ್ಗಳಿಗೆ ಓರ್ವ ಸೆಕ್ಟರ್ ಮ್ಯಾಜಿಸ್ಟ್ರೇಟ್ ಇರುತ್ತಾರೆ. ಇವರೆಲ್ಲ ಚುನಾವಣಾ ಮತಪಟ್ಟಿಯಿಂದ ತೊಡಗಿ ಎಲ್ಲ ವೀಕ್ಷಣೆಗಳನ್ನು ಮಾಡುತ್ತಾರೆ. ಎಲ್ಲಾದರೂ ಲೋಪಗಳಿದ್ದರೆ ತಕ್ಷಣ ಸರಿಪಡಿಸುತ್ತಾರೆ. ಇದೇ ವೇಳೆ ನೀತಿ ಸಂಹಿತೆ ಉಲ್ಲಂಘನೆ ಇತ್ಯಾದಿ ಪ್ರಕರಣಗಳ ಬಗ್ಗೆಯೂ ನಿಗಾ ಇರಿಸುತ್ತಾರೆ ಎಂದರು.
ಚುನಾವಣಾ ಪ್ರಕ್ರಿಯೆಯ ವಿದ್ಯಮಾನಗಳ ಫೋಟೊಗಳನ್ನು ನೇರವಾಗಿ ಚುನಾವಣಾ ವೆಬ್ಸೈಟ್ಗೆ ತಕ್ಷಣ ದಾಖಲು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಆಯೋಗದ ಸೂಚನೆಯಂತೆ ಕಂಟ್ರೋಲ್ ರೂಂಗೆ 1950 ಹಾಗೂ 1077 ಟೋಲ್ ಫ್ರೀ ಸಂಖ್ಯೆ ಇದೆ. ಯಾರು ಬೇಕಾದರೂ ಮಾಹಿತಿ ನೀಡಬಹುದು ಎಂದರು.
ಇನ್ನು ಜಿಲ್ಲೆಯ ಗಡಿಭಾಗದ ಮತದಾರರ ಪಟ್ಟಿ ಪರಿಶೀಲನೆ ಕೂಡ ಸರಿಯಾಗಿ ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ 2 ರಾಜ್ಯಗಳಲ್ಲಿ ಮತದಾನ ಮಾಡುವ ಅವಕಾಶ ಇರದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಹೇಳಿದರು.
ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ 2 ಗಂಟೆ ಮುನ್ನ ಬ್ಯಾನರ್ ಇತ್ಯಾದಿಗಳ ಅಳವಡಿಕೆಗೆ ಅವಕಾಶ ಇರುತ್ತದೆ, ಕಾರ್ಯಕ್ರಮದ ಕೂಡಲೆ ತೆರವುಗೊಳಿಸಬೇಕಾಗುತ್ತದೆ. ಏ.7ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ ಚುನಾವಣಾ ಆಯೋಗದಿಂದ ಎಲ್ಲ ಮತದಾರರಿಗೆ ಫೋಟೋ ಇರುವ ಮತದಾರರ ಚೀಟಿ ನೀಡುವ ವ್ಯವಸ್ಥೆ ಇದೆ. ಇದನ್ನು ಅಧಿಕಾರಿಗಳೇ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಪುತ್ತೂರು ಎಎಸ್ಪಿ ಸದಾನಂದ ವರ್ಣೇಕರ್, ಪುತ್ತೂರು ಸಹಾಯಕ ಕಮೀಶನರ್ ಎಚ್. ಪ್ರಸನ್ನ ಇದ್ದರು.
ಮಧ್ಯಾಹ್ನ ನಂತರ ಪುತ್ತೂರು ಉಪವಿಭಾಗದ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ತರಬೇತಿ ಹಾಗೂ ಮಾಹಿತಿ ಕಾರ್ಯಕ್ರಮ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.