ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದಕ್ಷಿಣ ಕನ್ನಡದಲ್ಲಿ ಬಂಡಾಯಕ್ಕಿಲ್ಲ ಗೆಲವು

Rashmi Kasaragodu
Updated On : 31 Mar 2013, 1:30 am

ಆತ್ಮಭೂಷಣ್
ಮಂಗಳೂರು: ಚುನಾವಣೆಯಲ್ಲಿ ಬಂಡಾಯ ಸ್ಪರ್ಧೆ ಮಾಮೂಲು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡಾಯ ಸ್ಪರ್ಧಿಸಿದವರು ಇದುವರೆಗೆ ಗೆಲವು ಪಡೆದ ನಿದರ್ಶನ ಇಲ್ಲ. ವಿಧಾನಸಭಾ ಚುನಾವಣೆಗಳಲ್ಲಿ ಬಂಡಾಯ ಸ್ಪರ್ಧಿಸಿದರೂ ಗೆಲ್ಲುವ ತಾಕತ್ತು ಪ್ರಾಪ್ತವಾಗಿಲ್ಲ.
 ಬಂಡಾಯ ಸ್ಪರ್ಧೆ ನಡೆದಿರುವಲ್ಲಿ ಬಿಜೆಪಿಗೆ ಗರಿಷ್ಠ ಹಾಗೂ ಕಾಂಗ್ರೆಸ್ಗೆ ಕನಿಷ್ಠ ಲಾಭ ಆಗಿದೆ. ಬಿಜೆಪಿ ವಿರುದ್ಧ ಬಂಡಾಯ ಸ್ಪರ್ಧೆಯಲ್ಲಿ ಬಿಜೆಪಿಗೆ, ಕಾಂಗ್ರೆಸ್ ಬಂಡಾಯದಲ್ಲಿ ಕೆಲವು ಕಡೆ ಮಾತ್ರ ಕಾಂಗ್ರೆಸ್ಗೆ ಗೆಲವಾಗಿದೆ. ಹೆಚ್ಚು ಬಾರಿ ಬಂಡಾಯದ ಲಾಭ ಪಡೆದದ್ದು ಬಿಜೆಪಿ. ಬಂಡಾಯ ನಿಂತವರು ಠೇವಣಿ ಕಳಕೊಂಡ ಉದಾಹರಣೆಯೂ ಇದೆ.
ಮೊದಲ ಬಂಡಾಯ: 1957 ಹಾಗೂ 62ರಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ನಿಂದ ಶಾಸಕರಾದ ಸುಬ್ಬಯ್ಯ ನಾಯ್ಕ 72ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆಗ ಗೆಲವು ಪಡೆದದ್ದು ಕಾಂಗ್ರೆಸ್ನ ಪಿ.ಡಿ.ಬಂಗೇರ(23089). ಸುಬ್ಬಯ್ಯ ನಾಯ್ಕರಿಗೆ 1246 ಮತ ದಕ್ಕಿತ್ತು. 1978ರಲ್ಲಿ ಬಾಕಿಲ ಹುಕ್ರಪ್ಪ ಪಕ್ಷೇತರರಾಗಿ ಸ್ಪರ್ಧಿಸಿದಾಗ ಬಿಜೆಪಿಯ ರಾಮಚಂದ್ರ(24148 ಮತ)ಗೆದ್ದಿದ್ದರು. ಹುಕ್ರಪ್ಪರಿಗೆ ಕೇವಲ 198 ಮತ ಸಿಕ್ಕಿತ್ತು. 1983ರಲ್ಲಿ ಹುಕ್ರಪ್ಪ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾದರು.
 1983ರಲ್ಲಿ ವಿಟ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬಂಡಾಯ ಹೊಡೆತ ಕೊಟ್ಟಿತ್ತು. ಶಿವರಾಮ ಶೆಟ್ಟಿಗೆ ಟಿಕೆಟ್ ನೀಡಿದ ಸಿಟ್ಟಿನಲ್ಲಿ ಬಿ.ಎ.ಉಮರಬ್ಬ ಬಂಡಾಯ ಸ್ಪರ್ಧಿಸಿದ್ದರು. 15 ಸಾವಿರ ಮತ ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಸೋಲುಣಿಸಿ, ಬಿಜೆಪಿಯ ರುಕ್ಮಯ ಪೂಜಾರಿ ಗೆಲವಿಗೆ ಕಾರಣರಾದರು. 1989ರಲ್ಲಿ ಲೋಕೇಶ್ವರಿ ವಿನಯಚಂದ್ರ(294 ಮತ)ಕಾಂಗ್ರೆಸ್ ಬಂಡಾಯ ಸ್ಪರ್ಧಿಸಿದರೂ ಪಕ್ಷದ ಅಭ್ಯರ್ಥಿ ಗಂಗಾಧರ ಗೌಡ(40964 ಮತ)ಗೆಲವು ಸಾಧಿಸಿದರು. ಲೋಕೇಶ್ವರಿ ವಿನಯಚಂದ್ರ 85ರಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿ ಬಿಜೆಪಿ ವಿಜಯೀ ಅಭ್ಯರ್ಥಿ ವಸಂತ ಬಂಗೇರ(33,378) ವಿರುದ್ಧ 27048 ಮತ ಪಡೆದು ಸೋತಿದ್ದರು.
ಬಂಡಾಯ ಪರ್ವ: 1994, ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಬಂಡಾಯ ಪರ್ವ. ಸುರತ್ಕಲ್ ಕ್ಷೇತ್ರದಲ್ಲಿ 89ರಲ್ಲಿ ಶಾಸಕರಾಗಿದ್ದ ಎಂ.ಎನ್.ಅಡ್ಯಂತಾಯ 94ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಕುಮಾರ್ ಶೆಟ್ಟಿ(25,587 ಮತ)ವಿರುದ್ಧ ಸ್ಪರ್ಧಿಸಿ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದರು. ಅಡ್ಯಂತಾಯ 8,816 ಮತ ಬಾಚಿದ್ದರು. ಆಗ ಬಿಜೆಪಿ ಕುಂಬ್ಳೆ ಸುಂದರ ರಾವ್(29,589)ಗೆಲವಿನ ನಗೆ ಬೀರಿದ್ದರು.
 ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೆಸ್ನ ದಿನಕರ ಉಳ್ಳಾಲ್ ಪಕ್ಷೇತರರಾಗಿ ಸ್ಪರ್ಧಿಸಿ 2096 ಮತ ಪಡೆದಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಮಸೂದ್(18817) ಎದುರು ಬಿಜೆಪಿಯ ಜಯರಾಮ ಶೆಟ್ಟಿ(24412)ಗೆದ್ದರು. ಪುತ್ತೂರಿನಲ್ಲಿ 2004ರಲ್ಲಿ ಟಿಕೆಟ್ ಸಿಗದ ಬೇಸರದಲ್ಲಿ ಕಾವು ಹೇಮನಾಥ ಶೆಟ್ಟಿ ಕೆಸಿಪಿ ಪಕ್ಷ ಸೇರಿ ಕಾಂಗ್ರೆಸ್ ಸೋಲಿಸಲು ಸಫಲರಾದರು. ವಿನಯ ಕುಮಾರ್ ಸೊರಕೆ(52611) ಎದುರು ಬಿಜೆಪಿಯ ಡಿ.ವಿ.ಸದಾನಂದ ಗೌಡ(5395)ಗೆದ್ದು ನಕ್ಕರು. ಹೇಮನಾಥ ಶೆಟ್ಟಿಗೆ 1782 ಮತ ಬಂದಿತ್ತು.
2008ರ ಚುನಾವಣೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ 29,734 ಮತ ಗಳಿಸಿದ್ದರು. ಕಾಂಗ್ರೆಸ್ನಿಂದ ಬಂಡೆದ್ದ ನಳಿನಿ ಲೋಕಪ್ಪ ಗೌಡಗೆ 2721 ಮತ ಬಿತ್ತು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಬೊಂಡಾಲ ಜಗನ್ನಾಥ ಶೆಟ್ಟಿ(45180) ಅಲ್ಪ ಮತ ಅಂತರದಲ್ಲಿ ಬಿಜೆಪಿಯ ಮಲ್ಲಿಕಾ ಪ್ರಸಾದ್(46605)ಎದುರು ಸೋಲಬೇಕಾಯಿತು.
ಬಂಟ್ವಾಳದಲ್ಲಿ 85ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ನ ರಮಾನಾಥ ರೈ(26344)ಗೆ ಶರಣಾಗಿದ್ದ ಶಿವರಾವ್(18328 ಮತ) 1994ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಪಡೆದ ಮತ 905. ಆಗಲೂ ಕಾಂಗ್ರೆಸ್ನ ರಮಾನಾಥ ರೈ(34027)ಗೆದ್ದದ್ದು.
ಬೆಳ್ತಂಗಡಿಯಲ್ಲಿ 2008ರಲ್ಲಿ ಹಿಂದೂ ಸಂಘಟನೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸಿ 7284 ಮತ ಪಡೆದಿದ್ದರು. ಬಿಜೆಪಿಯ ಪ್ರಭಾಕರ ಬಂಗೇರಗೆ 43425 ಮತ, ಕಾಂಗ್ರೆಸ್ನ ವಸಂತ ಬಂಗೇರ 59528 ಮತ ಪಡೆದು ಜಯಶಾಲಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement