'ಹಣ ಸಂಪಾದನೆಗಾಗಿ ವೈದ್ಯ ವೃತ್ತಿ ಆಯ್ಕೆ ಮಾಡಬೇಡಿ'
ಉಡುಪಿ: ವೈದ್ಯರ ನಿಜವಾದ ಕೆಲಸ ಜನರ ಆರೋಗ್ಯವನ್ನು ಕಾಪಾಡುವುದೇ, ಹೊರತು ಹಣ ಸಂಪಾದನೆ ಅಲ್ಲ. ಆದ್ದರಿಂದ ಕೇವಲ ಹಣ ಸಂಪಾದನೆಗಾಗಿ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ ಎಂದು ಮಣಿಪಾಲ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪದ್ಮಭೂಷಣ ಪ್ರೊ.ಬಿ.ಎಂ. ಹೆಗಡೆ ಹೇಳಿದರು.
ಅವರು ಶನಿವಾರ ಇಲ್ಲಿನ ಉದ್ಯಾವರದ ಕುತ್ಪಾಡಿಯ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ವೈದ್ಯರಿಗಿರಬೇಕಾದ ಮುಖ್ಯ ಅರ್ಹತೆ ಒಳ್ಳೆಯ ಮನುಷ್ಯನಾಗಿರುವುದು. ಆದ್ದರಿಂದ ಮೊದಲು ಒಳ್ಳೆಯ ಮನುಷ್ಯನಾಗಿರುವುದನ್ನು ಕಲಿತುಕೊಳ್ಳಿ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಯಿಲೆಗೊಳಗಾದ ವ್ಯಕ್ತಿ ಔಷಧ ತೆಗೆದುಕೊಳ್ಳವಾಗ ಆತನಿಗೆ ವೈದ್ಯನಲ್ಲಿ ನಂಬಿಕೆ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ವೈದ್ಯನಾದವರು ವಿಶ್ವಾಸಾರ್ಹತೆಯನ್ನು ಹೊಂದಿರಬೇಕು. ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದು ವಿಶ್ವದಾದ್ಯಂತ ಆಲೋಪತಿ ಪದ್ಧತಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದರ ಜೊತೆಗೆ ಅದರ ಬೇಡಿಕೆ ಕೂಡ ಹೆಚ್ಚಿದೆ. ಆದ್ದರಿಂದ ಆಯುರ್ವೇದ ವೈದ್ಯರಿಗೆ ವಿಶ್ವದಾದ್ಯಂತ ಬೇಡಿಕೆ ಮತ್ತು ಉತ್ತಮ ಭವಿಷ್ಯ ಇದೆ ಎಂದರು.
ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಬಿ. ರವಿಶಂಕರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಯು.ಎನ್. ಪ್ರಸಾದ್, ಉಪಪ್ರಾಂಶುಪಾಲ ಕೆ.ಆರ್. ರಾಮಚಂದ್ರ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿಯ ಡೀನ್ ಡಾ.ಬಿ.ಆರ್. ದೊಡ್ಮನಿ ಇದ್ದರು. ಡಾ.ವಿ.ಕೆ. ಶಶಿಧರ ಹೊಳ್ಳ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಜಯಕೃಷ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿ, ಡಾ. ಮಮತಾ ಕೆ.ವಿ. ವಂದಿಸಿದರು.