ಹೆದರಿಲ್ಲ, ನನ್ನ ರಾಜಕೀಯ ಜೀವನ ಮುಗಿದಿಲ್ಲ: ಭಟ್
ಉಡುಪಿ: ಅಶ್ಲೀಲ ಸಿ.ಡಿ. ತಾನು ಚುನಾವಣೆಗೆ ಸ್ಪರ್ಧಿಸದಂತೆ ವಿರೋಧ ಪಕ್ಷದವರು ಮಾಡಿದ ಷಡ್ಯಂತ್ರ. ಇದರಿಂದ ತನಗೆ ಅಘಾತ, ನೋವಾಗಿದೆ. ಆದರೆ ಹೆದರಿಕೆಯಾಗಿಲ್ಲ, ತನ್ನ ರಾಜಕೀಯ ಜೀವನ ಇನ್ನೂ ಮುಗಿದಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಿ.ಡಿ.ಯಿಂದಾಗಿ ಪಕ್ಷದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಆಗಬಾರದು ಎನ್ನುವ ಕಾರಣಕ್ಕೆ ಚುನಾವಣೆಯಿಂದ ಹಿಂದಕ್ಕೆ ಸರಿಯುವ ನಿರ್ಧಾರ ಮಾಡಿದ್ದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರು ತನಗೆ ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿಲ್ಲ, ಉಡುಪಿಯಿಂದ ಸ್ಪರ್ಧಿಸುವುದಕ್ಕೆ ಪಕ್ಷ ಕೂಡ ನನ್ನ ಹೆಸರನ್ನೇ ಅಂತಿಮಗೊಳಿಸಿತ್ತು. ಆದರೆ ಸಿ.ಡಿ. ಪ್ರಕರಣದಿಂದ ನೋವಾಗಿ ನಾನೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಈಗ ಅಭಿಮಾನಿಗಳ ಒತ್ತಡ ಹೆಚ್ಚುತ್ತಿದೆ. ಆದ್ದರಿಂದ ಈಗ ನಿರ್ಧಾರವನ್ನು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇನೆ, ವರಿಷ್ಠರು ಹೇಳಿದಂತೆ ತಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಮುಖ್ಯಮಂತ್ರಿ ಈ ಸಿ.ಡಿ. ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ಸಿ.ಡಿ.ಯನ್ನು ಯಾರು ತಯಾರಿಸಿದ್ದಾರೆ, ಎಲ್ಲಿ ತಯಾರಿಸಿದ್ದಾರೆ, ವಿತರಣೆ ಮಾಡಿದ ಅನಾಮಧೇಯ ವ್ಯಕ್ತಿ ಯಾರು ಎಂಬುದು ತನಿಖೆಯಾಗಬೇಕು ಮತ್ತು ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರಘುಪತಿ ಭಟ್ ಆಗ್ರಹಿಸಿದರು.