ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಯಸ್ಸು 106; ದಣಿವರಿಯದ ಸಿದ್ಧಗಂಗಾ ಗುರು

Vishwanath S
Updated On : 1 Apr 2013, 11:33 am

ಕ.ಪ್ರ.ವಾರ್ತೆ , ತುಮಕೂರು , ಮಾ.31
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಅಭಿನವ ಬಸವಣ, ಎಂದೆಲ್ಲ ಭಕ್ತ ಸಮೂಹದಿಂದ ಕರೆಯಿಸಿಕೊಳ್ಳುವ ಶತಾಯುಷಿ ಸಿದ್ಧಗಂಗಾ ಶ್ರೀಗಳು ಇಂದು (ಏಪ್ರಿಲ್ 1) 106ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಾವಿರಾರು ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿರುವ ಶ್ರೀಗಳು ನೂರಾರು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದರೂ ಉತ್ಸಾಹ ಮಾತ್ರ ಬತ್ತಿಲ್ಲ.
ಭಕ್ತರ ಕೋರಿಕೆಯನ್ನು ಮನ್ನಿಸಿ ಈಗಲೂ ನೂರಾರು ಕಿಲೋ ಮೀಟರ್ ಪ್ರಯಾಣ ಮಾಡುವ, ಮಠದ ಆಡಳಿತವನ್ನೆಲ್ಲ ನಿಭಾಯಿಸುವ, ಶ್ರೀ ಮಠದ ಮಕ್ಕಳೊಂದಿಗೆ ಸಮಯ ಕಳೆಯುವ, ಮಠದ ಆವರಣದಲ್ಲಿ ಪ್ರತಿದಿನ ಸಂಜೆ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಡಾ. ಶಿವಕುಮಾರ ಸ್ವಾಮೀಜಿ ಅವರು ಈಗಲೂ ಚಟುವಟಿಕೆಯ ಕೇಂದ್ರ ಬಿಂದು.
ನೂರಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ಮಕ್ಕಳಿಗೆ ವಿದ್ಯೆ ಕಲ್ಪಿಸಿ ಅಪಾರ ಸಾಧನೆ ಮಾಡಿರುವ ಸಿದ್ಧಗಂಗಾ ಶ್ರೀಗಳು ಇಲ್ಲಿಯವರೆಗೆ ಮಾಡಿರುವುದು ಏನೇನೂ ಅಲ್ಲ. ಮಾಡಬೇಕಾದ್ದು ಇನ್ನೂ ಹಿಮಾಲಯದಷ್ಟಿದೆ ಎಂಬ ವಿನಯವನ್ನು ಪ್ರದರ್ಶಿಸುತ್ತಾರೆ.
ಸದಾ ಕಾರ್ಯಶೀಲ: ಮುಂಜಾನೆ 2.30ಕ್ಕೆ ಏಳುವ ಶ್ರೀಗಳು ರಾತ್ರಿ 11ರವರೆಗೆ ದಣಿವರಿಯದೆ ದುಡಿಯುತ್ತಾರೆ. ಎದ್ದ ತಕ್ಷಣ ಯೋಗಾಭ್ಯಾಸ ಸ್ನಾನಾದಿಗಳು ಮುಗಿಸಿ ಪೂಜೆ ಕೋಣೆಗೆ ಹೋಗುತ್ತಾರೆ. ಅವರಿಗೆ ಕಂಠಪಾಠವಾಗಿರುವ ಸಪ್ಪಣ,ನವರ ಹಾಡು, ಮುಪ್ಪಿನ ಷಡಕ್ಷರಿಗಳು ಹಾಗೂ ನಿಜಗುಣರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿಕೊಳ್ಳುತ್ತಾ ಶಿವಪೂಜೆಯಲ್ಲಿ ತೊಡಗಿಕೊಳ್ಳುತ್ತಾರೆ. ಒಪ್ಪಿಕೊಂಡ ಕಾರ್ಯಕ್ರಮ ಇಲ್ಲದಿದ್ದರೆ ವಿದ್ಯಾರ್ಥಿಗಳ ಸಮುದಾಯವನ್ನು ಪ್ರವೇಶಿಸಿ ಇಂಗ್ಲಿಷ್ ಮತ್ತು ಸಂಸ್ಕೃತ ಪಾಠವನ್ನು ಬೋಧಿಸುತ್ತಾರೆ.
ಶ್ರೀ ಮಠದಲ್ಲಿ ನಡೆಯುವ ಕಟ್ಟಡಗಳ ಕಾಮಗಾರಿಗಳನ್ನು ಸ್ವತಃ ಶ್ರೀಗಳೇ ಪರಿಶೀಲಿಸುತ್ತಾರೆ. ನಂತರ ದಾಸೋಹ ಭವನಕ್ಕೆ ಹೋಗಿ ಊಟದ ಮೇಲ್ವಿಚಾರವನ್ನೆಲ್ಲ ಗಮನಿಸುತ್ತಾರೆ. ತಮ್ಮ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲರು ಅಥವಾ ಆಡಳಿತ ಮಂಡಳಿಯವರು ಮಠಕ್ಕೆ ಬಂದರೆ ಶೈಕ್ಷಣಿಕ ಸಾಧನೆ ಬಗ್ಗೆ ವಿಚಾರಿಸುತ್ತಾರೆ. ಉಳಿದಂತೆ ಮಠದ ಆಗು ಹೋಗುಗಳನ್ನೆಲ್ಲಾ ಪರಿಶೀಲಿಸುತ್ತಾರೆ. ರಾತ್ರಿ 11ರವರೆಗೆ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಳ್ಳುವ ಶ್ರೀಗಳು ರಾತ್ರಿ 12 ಗಂಟೆ ವೇಳೆಗೆ ನಿದ್ರೆಗೆ ಜಾರುತ್ತಾರೆ. ಈ ಅವಧಿಯಲ್ಲಿ ಅವರ ಓದುವ ಹವ್ಯಾಸ ಕೂಡ ಸೇರಿರುತ್ತದೆ.
ಸುಮಾರು ಒಂದು ಸಾವಿರ ಪ್ರದರ್ಶನ ಕಂಡಿರುವ ಶ್ರೀ ಮಠದ ವಿದ್ಯಾರ್ಥಿಗಳೇ ಅಭಿನಯಿಸಿರುವ 'ಜಗಜ್ಯೋತಿ ಬಸವೇಶ್ವರ' ನಾಟಕದ ತಾಲೀಮನ್ನು ಶ್ರೀಗಳು ವೀಕ್ಷಿಸುತ್ತಾರೆ. ಕೆಲವು ಸಲಹೆ ಸೂಚನೆಗಳನ್ನೂ ಕೊಡುತ್ತಾರೆ.
ಎಲ್ಲರನ್ನು ಗೌರವಿಸುವ, ಪ್ರೀತ್ಯಾದಾರದಿಂದ ಕಾಣುವ ಸಿದ್ಧಗಂಗಾ ಶ್ರೀಗಳು 106ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ಸಹಜವಾಗಿ ಭಕ್ತ ಸಮೂಹದಲ್ಲಿ ಖುಷಿ ಮೂಡಿಸಿದೆ. ಏ.1ರಂದು ಶ್ರೀಗಳ ದಿನನಿತ್ಯದ ಪೂಜಾ ಕಾರ್ಯ ಮುಗಿದ ಬಳಿಕ ಭಕ್ತವೃಂದ ಹಾಗೂ ಹರಗುರುಚರಮೂರ್ತಿಗಳು ಶ್ರೀಗಳ ಪಾದಪೂಜೆ ನೆರವೇರಿಸುತ್ತಾರೆ. ಏ.13ಕ್ಕೆ ಗುರುವಂದನಾ ಮಹೋತ್ಸವವಿದೆ.

-ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement