ಅಲ್ಪಸಂಖ್ಯಾತರು 'ಕೈ'ಗೊಂಬೆಗಳಲ್ಲ: ಜೆಡಿಎಸ್ ಸ್ಪಷ್ಟನೆ
ಸುಳ್ಯ: ಅಲ್ಪಸಂಖ್ಯಾತರು ಶೇ. 90 ನಮ್ಮ ಪರವಾಗಿದ್ದಾರೆ ಮತ್ತು ಜನತಾ ದಳಕ್ಕೆ ಮತ ನೀಡಿದರೆ ಬಿಜೆಪಿ ಗೆಲ್ಲುತ್ತದೆ ಎಂಬ ಅಪಪ್ರಚಾರವನ್ನು ಕಾಂಗ್ರೆಸಿನವರು ಮಾಡುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರು ಕಾಂಗ್ರೆಸ್ ಕೈಗೊಂಬೆಯೂ ಅಲ್ಲ, ಗುಲಾಮರೂ ಅಲ್ಲ ಎಂದು ರಾಜ್ಯ ಜೆಡಿಎಸ್ ಯುವ ಘಟಕ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸುಮಾರು ರು. 120 ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸಿ ಅವರು ಮುಖ್ಯವಾಹಿನಿಗೆ ಬರುವಲ್ಲಿ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಸ್ವಉದ್ಯೋಗ, ವಾಹನ, ವಿದ್ಯಾಭ್ಯಾಸ, ವ್ಯಾಪಾರಗಳಿಗೆ ಸಹಾಯಧನ ಹಾಗೂ ಹಜ್ ಘರ್ ನಿರ್ಮಾಣಕ್ಕೆ ಭೂಮಿ ಮತ್ತು ಅನುದಾನ ಒದಗಿಸಿಕೊಡುವ ಮೂಲಕ ನಮ್ಮ ಕಲ್ಯಾಣಕ್ಕೆ ಕುಮಾರಸ್ವಾಮಿ ಶ್ರಮಿಸಿದ್ದಾರೆ. ಇದನ್ನು ಅಲ್ಪಸಂಖ್ಯಾತರು ಮನಗಂಡು ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಎಸ್.ಡಿ.ಪಿ.ಐ.ನಿಂದ ಯಾವುದೇ ರಾಜಕೀಯ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಪಸಂಖ್ಯಾತರು ಈ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು.