ಇಂದು ಪುತ್ತೂರು ಸ್ವರ್ಣ ಕಲಶ ಸಮರ್ಪಣೆ
ಪುತ್ತೂರು: ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿಶ್ವಕರ್ಮ ಸಮುದಾಯದ ಸ್ವರ್ಣ ಕಲಶ ನಿಧಿ ಸಂಗ್ರಹ ಮತ್ತು ಸಮರ್ಪಣಾ ಸಮಿತಿ ವತಿಯಿಂದ ಸುಮಾರು ಅರ್ಧ ಕೆ.ಜಿ. ಗಿಂತಲೂ ಅಧಿಕ ಅಪರಂಜಿ ಚಿನ್ನದಿಂದ ತಯಾರಿಸಲಾದ ದೇವಸ್ಥಾನದ ಗರ್ಭಗುಡಿಯ ಪ್ರಧಾನ ಸ್ವರ್ಣ ಕಲಶ ಸಮರ್ಪಣಾ ಕಾರ್ಯಕ್ರಮ ಗುರುವಾರ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ವಾಮದೇವ ಆಚಾರ್ಯ ಮತ್ತು ಕಾರ್ಯದರ್ಶಿ ಭೋಜರಾಜ ಆಚಾರ್ಯ ತಿಳಿಸಿದ್ದಾರೆ. ಕಾರ್ಯಕ್ರಮ ಗುರುಶಿವಸುಜ್ಞಾನ ಮೂರ್ತಿ ಮಹಾಸ್ವಾಮೀಜಿ ಮತ್ತು ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಪುತ್ತೂರಿನ ಬೊಳುವಾರಿನ ವಿಶ್ವಕರ್ಮ ಸಭಾಭವನದಿಂದ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದರು.
ಮಂಗಳೂರು: ನಾಟಾ ಪರೀಕ್ಷೆ ಕೇಂದ್ರ ಆರಂಭ
ಮಂಗಳೂರು: 2013ನೇ ಸಾಲಿನ ಆರ್ಕಿಟೆಕ್ಚರ್ ಪದವಿ ಕೋರ್ಸುಗಳಿಗಾಗಿ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಪಡೆಯಲು ವಳಚ್ಚಿಲ್ ಶ್ರೀನಿವಾಸ ತಾಂತ್ರಿಕ ವಿದ್ಯಾಲಯದಲ್ಲಿ ನಾಟಾ ಕೇಂದ್ರ ಪ್ರಾರಂಭಿಸಲಾಗಿದೆ. ದಿಲ್ಲಿಯ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಸಂಸ್ಥೆ ಅನುಮತಿ ನೀಡಿದ್ದು, ವಿದ್ಯಾರ್ಥಿಗಳು ಕೇಂದ್ರಕ್ಕೆ ಬಂದು ಹೆಸರು ನೋಂದಾಯಿಸಿ ಪರೀಕ್ಷೆ ಬರೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಚೇರಿ 0824-2274730 ಸಂಪರ್ಕಿಸಿ.
ಪೆರ್ನೆ ದುರಂತ: ಎಚ್‌ಪಿಸಿಎಲ್ 17 ಲಕ್ಷ ಮಧ್ಯಂತರ ಪರಿಹಾರ ನೀಡಿಕೆ
ಮಂಗಳೂರು: ಪೆರ್ನೆಯಲ್ಲಿ ಏ.9ರಂದು ಸಂಭವಿಸಿದ ಗ್ಯಾಸ್ ಟ್ಯಾಂಕರ್ ಅವಘಡಕ್ಕೆ ಸಂಬಂಧಿಸಿ ಎಚ್‌ಪಿಸಿಎಲ್ ಮಧ್ಯಂತರ ಪರಿಹಾರವಾಗಿ ಒಟ್ಟು ರು. 17 ಲಕ್ಷ ಸಂತ್ರಸ್ತರಿಗೆ ಬಿಡುಗಡೆ ಮಾಡಿದೆ. ಈ ಘಟನೆಯಲ್ಲಿ 11 ಮಂದಿ ಸಾವಿಗೀಡಾಗಿದ್ದು, ಪರಿಸರದ 12 ಮನೆಯ ಸೊತ್ತು ಹಾನಿಗೀಡಾಗಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ನಷ್ಟ ಲೆಕ್ಕಾಚಾರ ಮಾಡಿದ್ದು, ರು. 43,19,764.78 ನಷ್ಟ ಅಂದಾಜಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. 7 ವಾಹನಗಳು ಹಾನಿಗೀಡಾಗಿದ್ದು, ರು. 8.10 ಲಕ್ಷ ನಷ್ಟ ಅಂದಾಜಿಸಲಾಗಿತ್ತು. ಈ ಕುರಿತು ಜಿಲ್ಲಾಡಳಿತ ಏ.10 ಮತ್ತು 22ರಂದು ಸಭೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಅನಿಲ ಸಾಗಾಟ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್‌ಪಿಸಿಎಲ್ ಮತ್ತು ಎಂಆರ್‌ಪಿಎಲ್ ಕಂಪನಿಗಳಿಗೆ ಸೂಚಿಸಿತ್ತು. ಇದೀಗ ಎಚ್‌ಪಿಸಿಎಲ್ ಮೃತರ ಕುಟುಂಬಕ್ಕೆ ತಲಾ ರು. 1.50 ಲಕ್ಷ, ಗಾಯಾಳುಗಳಿಗೆ ತಲಾ ರು. 50 ಸಾವಿರ ಸೇರಿ ಒಟ್ಟು ರು. 17 ಲಕ್ಷ ಮಂಜೂರು ಮಾಡಿದೆ. ಮೃತ ಕುಟುಂಬಕ್ಕೆ ಈಗಾಗಲೇ ತಲಾ ರು. 1 ಲಕ್ಷದಂತೆ ರು. 10 ಲಕ್ಷ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಕರಪತ್ರ ಜತೆ ನೋಟು ಹಂಚಿಕೆ: ಕೆಜೆಪಿ ಆರೋಪ
ಪುತ್ತೂರು: ಪುತ್ತೂರಿನಲ್ಲಿ ಕರಪತ್ರದ ಜೊತೆಗೆ ನೋಟು ಹಂಚುವ ಚಟುವಟಿಕೆ ನಡೆಯುತ್ತಿದೆ. ಇದು ಕೀಳು ರಾಜಕಾರಣವಾಗಿದೆ, ಓಟಿಗಾಗಿ ನೋಟು ನೀಡಿ ಪುತ್ತೂರಿನ ಬುದ್ಧಿವಂತ ಜನರ ಆಕರ್ಷಿಸಲು ಸಾಧ್ಯವಿಲ್ಲ ಎಂದು ಕೆಜೆಪಿ ಅಭ್ಯರ್ಥಿ ಜಯರಾಮ್ ಭಟ್ ಹೇಳಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ಕಾನೂನು ನಿಷೇಧ ಮಸೂದೆಯನ್ನು ನಾವು ಮತ್ತೆ ಗೆದ್ದು ಬಂದರೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ, ಅಧಿಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲಲ್ಲ ಎಂದು ಪ್ರಶ್ನಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ರುಕ್ಮಯ್ಯ ಗೌಡ, ಉಪಾಧ್ಯಕ್ಷ ಜಯಪ್ರಕಾಶ್, ಸಿದ್ದಿಕ್, ವಿಜಿತ್ ಇದ್ದರು.