ಇಂದು ಮೋದಿ ಆಗಮನ: ಸಂಚಾರ ಬದಲಾವಣೆ
ಮಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುರುವಾರ ನೆಹರು ಮೈದಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬಿಗುಬಂದೋಬಸ್ತ್ ಮತ್ತು ಸಂಚಾರ ಬದಲಾವಣೆ ಮಾಡಲಾಗಿದೆ. ವಿಶೇಷ ವಿಮಾನದಲ್ಲಿ ಮೋದಿ ಬೆಳಗ್ಗೆ 10ಕ್ಕೆ ಆಗಮಿಸಿ, ಮಧ್ಯಾಹ್ನ 12ಕ್ಕೆ ನಿರ್ಗಮಿಸುವರು. ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೋದಿಯವರು ಝಡ್ ಭದ್ರತೆ ಹೊಂದಿದ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಮೇ 2ರಂದು ಬೆಳಗ್ಗೆ 6 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ಸುಗಮ ಸಂಚಾರ ಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಮಿಷನರ್ ಮನೀಶ್ ಕರ್ಬಿಕರ್ ತಿಳಿಸಿದ್ದಾರೆ. ಬಜಪೆ ವಿಮಾನ ನಿಲ್ದಾಣದಿಂದ ಮರವೂರು, ಕಾವೂರು, ಬೋಂದೇಲ್, ಪದವಿನಂಗಡಿ, ಮೇರಿಹಿಲ್, ಯೆಯ್ಯಾಡಿ, ಕೆಪಿಟಿ, ಸರ್ಕ್ಯೂಟ್ ಹೌಸ್ ವರೆಗೆ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.ಸರ್ಕ್ಯೂಟ್ ಹೌಸ್ನಿಂದ ಬಟ್ಟಗುಡ್ಡೆ, ಕದ್ರಿಕಂಬ್ಳ, ಭಾರತ್ ಬೀಡಿ, ಬಂಟ್ಸ್ಹಾಸ್ಟೆಲ್, ಹಂಪನಕಟ್ಟೆ, ಕ್ಲಾಕ್ಟವರ್, ಎಬಿ ಶೆಟ್ಟಿ, ಹ್ಯಾಮಿಲ್ಟನ್ ವೃತ್ತದ ತನಕ, ರಾವ್ ಮತ್ತು ರಾವ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ರಸ್ತೆ ಎರಡೂ ಬದಿಗಳಲ್ಲಿ ಪಾರ್ಕಿಂಗ್ ನಿಷೇಧ. ಬೆಳಗ್ಗೆ 9.30ರಿಂದ ಕಾರ್ಯಕ್ರಮ ಮುಗಿಯುವ ತನಕ ಎ.ಬಿ.ಶೆಟ್ಟಿ ವೃತ್ತದಿಂದ ಕ್ಲಾಕ್ ಟವರ್ ಕಡೆಗೆ ಯು.ಪಿ.ಮಲ್ಯ ರಸ್ತೆಯಲ್ಲಿ ಎಲ್ಲ ತೆರನಾದ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ವಾಹನಗಳು ಹ್ಯಾಮಿಲ್ಟನ್ -ರಾವ್ ಮತ್ತು ರಾವ್ ವೃತ್ತ, ಕ್ಲಾಕ್ ಟವರ್ ವೃತ್ತ ಮೂಲಕ ಸಂಚರಿಸಬೇಕು.