ಕೇರಳ ಸಿಎಂ ಚಾಂಡಿ ಮಂಗಳೂರಿಗೆ ಇಂದು
ಮಂಗಳೂರು: ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಮೇ 2ರಂದು ಮಂಗಳೂರಿಗೆ ಆಗಮಿಸಿ ಕಾಂಗ್ರೆಸ್ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಸಹೋದಯ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವರು. ಬಳಿಕ ದಕ್ಷಿಣ ವಿಧಾನ ಸಭೆ ಕ್ಷೇತ್ರದ ಚುನಾವಣೆ ಪ್ರಚಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವರು ಎಂದು ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಂಟ್ವಾಳ ಕ್ಷೇತ್ರದ ಬಿ.ಸಿ.ರೋಡ್‌ನಲ್ಲಿರುವ ಚುನಾವಣೆ ಕಚೇರಿಯಲ್ಲಿ 11 ಗಂಟೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು. ಅಲ್ಲಿಂದ ಬೆಳ್ತಂಗಡಿಗೆ ತೆರಳಿ ಮಧ್ಯಾಹ್ನ 2 ಗಂಟೆಗೆ ಬಹಿರಂಗ ಪ್ರಚಾರ ನಡೆಸುವರು. ಸಂಜೆ 4 ಗಂಟೆಗೆ ಕಡಬದಲ್ಲಿ ಪ್ರಚಾರ ಸಭೆ, ಸಂಜೆ 6 ಗಂಟೆಗೆ ಮಂಗಳೂರು ಕ್ಷೇತ್ರದ ದೇರಳಕಟ್ಟೆಯಲ್ಲಿ ಪ್ರಚಾರ ಭಾಷಣ ಮಾಡಲಿದ್ದು, ಅಲ್ಲಿಂದ ಕೇರಳಕ್ಕೆ ತೆರಳುವರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣೆ ಉಸ್ತುವಾರಿ, ಕೇರಳ ಸಂಸದ -.ಥಾಮಸ್, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಅಶ್ರಫ್ ಇದ್ದರು.
ಮೂವರು ಅಭ್ಯರ್ಥಿಗಳಿಗೆ ರೈತ ಸಂಘ ಬೆಂಬಲ
ಮಂಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಈ ಚುನಾವಣೆಯಲ್ಲಿ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುತ್ತಿಲ್ಲ, ಅದರ ಬದಲು ಜಿಲ್ಲೆಯಲ್ಲಿ ರೈತ ಪರ ಮೂರು ಮಂದಿ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ದಕ್ಷಿಣದಲ್ಲಿ ರೈತ ಸಂಘದ ಕಾನೂನು ಸಲಹೆಗಾರ, ಜೆಡಿಎಸ್ ಅಭ್ಯರ್ಥಿ ಎಸ್.ಪಿ.ಚೆಂಗಪ್ಪ, ರೈತ ಚಳುವಳಿಗೆ ಬೆಂಬಲ ನೀಡಿದ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ, ರೈತ ಪರ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನೈಕ್‌ಗೆ ಬೆಂಬಲ ನೀಡಲಿದೆ ಎಂದರು. ಮಂಗಳೂರಲ್ಲಿ ರೈತರ ಬೆಳೆಗೆ ಮಧ್ಯವರ್ತಿ ತಪ್ಪಿಸಿ ನೇರ ಮಾರುಕಟ್ಟೆಗೆ ಅವಕಾಶ ಕಲ್ಪಿಸುವುದಾಗಿ ಅಭ್ಯರ್ಥಿಚೆಂಗಪ್ಪ ಭರವಸೆ ನೀಡಿದ್ದಾರೆ ಎಂದರು.
ಹಿಂದೂ-ಕ್ರೈಸ್ತ ದೇಗುಲಗಳಲ್ಲಿ ಪೂಜಿಸುವ ಮುಸ್ಲಿಂ ಅಭ್ಯರ್ಥಿಗಳ ಸೋಲಿಸಲು ಕರೆ
ಮಂಗಳೂರು: ಮೇ 5ರಂದು ನಡೆಯುವ ಚುನಾವಣೆಯಲ್ಲಿ ಇಸ್ಲಾಮಿನ ಗಂಧಗಾಳಿ ಇಲ್ಲದ ಮುಸ್ಲಿಂ ನಾಮಧಾರಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಕೇಂದ್ರೀಯ ಮಂಡಳಿ ಕರೆ ನೀಡಿದೆ. ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಂ ಅಜಾದ್‌ರಂಥ ಕೆಲವೇ ಮಂದಿ ಧರ್ಮನಿಷ್ಠರನ್ನು ಹೊರತುಪಡಿಸಿದರೆ ಕಾಂಗ್ರೆಸ್ ಮತ್ತಿತರರ ರಾಜಕೀಯ ಪಕ್ಷಗಳು ಮುಸ್ಲಿಂ ಪ್ರತಿನಿಧಿಗಳಾಗಿ ಆಯ್ಕೆಯಾದ ಬಹುತೇಕ ಮಂದಿ ಇಸ್ಲಾಂ ಧರ್ಮಕ್ಕೆ ಅಪಚಾರ ಎಸಗಿದ್ದಾರೆ. ಇದರಿಂದಾಗಿಯೇ ಮುಸ್ಲಿಮರು ಇಂದಿನ ಸ್ಥಿತಿಗೆ ಇಳಿದಿದ್ದು, ಹಿಂದೂ-ಕ್ರೈಸ್ತ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಮತ ಯಾಚಿಸುವ ಮುಸ್ಲಿಂ ನಾಮಧಾರಿ ಅಭ್ಯರ್ಥಿಗಳನ್ನು ಸೋಲಿಸುವಂತೆ ಮುಸ್ಲಿಂ ಮತದಾರರಲ್ಲಿ ಮಂಡಳಿ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಲಾಕ್ಷಗಲ್ಲ, 'ಕೈ'ಗೆ ಅಹಿಂದ ಬೆಂಬಲ
ಮಂಗಳೂರು: ಜಿಲ್ಲೆಯ ಅಹಿಂದ ಸಂಘಟನೆಯೊಂದಿಗೆ ಸಮಾಲೋಚನೆ ನಡೆಸದೆ ಬೆಂಗಳೂರಿನ ಭಾರತೀಯ ರಿಪಬ್ಲಿಕ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿರುವ ಲೋಲಾಕ್ಷ ಅವರನ್ನು ಜಿಲ್ಲಾ ಅಹಿಂದ ಸಂಘಟನೆ ಬೆಂಬಲ ನೀಡುವುದಿಲ್ಲ ಎಂದು ಸಂಘಟನೆ ಅಧ್ಯಕ್ಷ ವಾಸುದೇವ ಬೋಳೂರು ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಆದ್ದರಿಂದ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರನ್ನು ಅಹಿಂದ ಸಂಘಟನೆ ಬೆಂಬಲಿಸುವ ಮೂಲಕ ಅಹಿಂದದ ನೇತಾರ ಸಿದ್ಧರಾಮಯ್ಯ ಅವರನ್ನು ಗೆಲ್ಲಿಸಲು ತೀರ್ಮಾನಿಸಿದೆ ಎಂದರು.