'ಕೈ' ಮತ ವಿಭಜನೆಗೆ ಕಣದಲ್ಲಿದೆ ಎಸ್‌ಡಿಪಿಐ: ಇಸಾಕ್
ಪುತ್ತೂರು: ಎಸ್‌ಡಿಪಿಐ ಬಿಜೆಪಿಯ ಸಂಪರ್ಕದಲ್ಲಿರುವ ಪಕ್ಷವಾಗಿದ್ದು, ಮತವಿಭಜನೆಗಾಗಿ ಸ್ಪರ್ಧಾಕಣದಲ್ಲಿದೆ. ಎಸ್‌ಡಿಪಿಐಗೆ ಬಿಜೆಪಿ ಹಣ ಸಹಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಮುಖಂಡ ಮಾಜಿ ಪುರಸಭಾ ಸದಸ್ಯ ಇಸಾಕ್ ಸಾಲ್ಮರ ಆರೋಪಿಸಿದ್ದಾರೆ.
ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲ್ಪ ಸಂಖ್ಯಾತರು ಎಂದೂ ಕೋಮುವಾದಿ ಪಕ್ಷಗಳನ್ನು ಬೆಂಬಲಿಸುವುದಿಲ್ಲ. ಎಸ್‌ಡಿಪಿಐ ಮತ್ತು ಬಿಜೆಪಿ ಪರಸ್ಪರ ಬೆಂಬಲಿತ ಪಕ್ಷಗಳಾಗಿದ್ದು ಜಾತ್ಯತೀತ ನಿಲವಿನ ಪಕ್ಷವಾದ ಕಾಂಗ್ರೆಸನ್ನು ಸೋಲಿಸುವ ಪ್ರಮುಖ ಗುರಿಯನ್ನು ಈ ಎರಡು ಪಕ್ಷಗಳು ಹೊಂದಿದೆ. ಆದರೆ ಅಲ್ಪ ಸಂಖ್ಯಾತರು ಇದನ್ನು ಬೆಂಬಲಿಸುವುದಿಲ್ಲ ಎಂದರು.
--
ಕಾಂಗ್ರೆಸಿಗೆ ಮರಳಲಾರೆ: ಸಾಲ್ಯಾನ್
ಕಾಪು: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ತಾನು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಖಾತೆ ತೆರೆಯಲಿದ್ದೇನೆ. ಮುಂದೆ ತಾನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವುದೊಂದೇ ತನ್ನ ಗುರಿ, ಇದು ತನ್ನ ಕೊನೆಯ ಚುನಾವಣೆ, ಮುಂದೆ ಸಮರ್ಥ ಯುವಕರನ್ನು ಸಜ್ಜುಗೊಳಿಸಿ ಅವರನ್ನು ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ವಿ. ಸಾಲ್ಯಾನ್ ಹೇಳಿದ್ದಾರೆ.
ಬುಧವಾರ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಪುನಲ್ಲಿ 1978ರಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಇಷ್ಟು ವರ್ಷ ಬೆಳೆಸಿದ್ದೇನೆ, ಪ್ರಾಮಾಣಿಕ ಕಾರ್ಯಕರ್ತನಾಗಿ ರಾತ್ರಿ ಹಗಲು ಶ್ರಮಿಸಿದ್ದೇನೆ. ನನ್ನಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಮಂದಿ ನಾಯಕರು, ಜನಪ್ರತಿನಿಧಿಗಳು ಹುಟ್ಟಿದ್ದಾರೆ. ಆದರೆ ಅದೇ ಪಕ್ಷದಲ್ಲಿ ತನಗೆ ಟಿಕೆಟು ನಿರಾಕರಿಸಿ ವಂಚಿಸಲಾಗಿದೆ ಎಂದು ಪುನರುಚ್ಚರಿಸಿದ ಸಾಲ್ಯಾನ್, ಒಂದು ಹಂತದಲ್ಲಿ ತಮಗೆ ಸಿಕ್ಕಿದ್ದ ಟಿಕೆಟ್ ಕೈತಪ್ಪುವುದಕ್ಕೆ ಕಾಂಗ್ರೆಸ್ ಪಕ್ಷದ ಹಾಲಿ ಅಭ್ಯರ್ಥಿ ವಿನಯಕುಮಾರ್ ಸೊರಕೆ ಅವರೇ ಕಾರಣ ಎಂದು ನೇರವಾಗಿ ಆಪಾದಿಸಿದರು. ಜೊತೆಗೆ ಆಸ್ಕರ್ ಅಥವಾ ಬೇರೆ ಯಾವುದೇ ನಾಯಕರು ಇದಕ್ಕೆ ಹೊಣೆಯಲ್ಲ ಎಂದರು.
ಸೊರಕೆ ಸುಳ್ಳುಗಾರ: ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಸೊರಕೆ ಅವರಿಗೆ ಬೆಂಬಲ ನೀಡುವುದಾಗಿ ನಾರಾಯಣ ಗುರುಗಳ ಪ್ರಮಾಣ ಮಾಡಿ ಹೇಳಿದ್ದೇನೆ ಎಂದು ಸೊರಕೆ ಹೇಳುತ್ತಿರುವುದು ಅಪ್ಪಟ ಸುಳ್ಳು, ಅವರೊಬ್ಬ ಮಹಾನ್ ಸುಳ್ಳುಗಾರ ಎಂದು ಸಾಲ್ಯಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಯುವ ಘಟಕದ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಮುಂತಾದವರಿದ್ದರು.