ತಿರುವನಂತಪುರಂ: ಶ್ರೀ ಸ್ವಾತಿ ತಿರುನಾಳ್ ಸಂಗೀತ ಸಭಾಗೆ ವೀರೇಂದ್ರ ಹೆಗ್ಗಡೆ ಭೇಟಿ
ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಸ್ವಾತಿ ತಿರುನಾಳ್ ಸಂಗೀತ ಸಭಾಕ್ಕೆ ಇತ್ತೀಚೆಗೆ ಭೇಟಿ ನೀಡಿದರು.
ಖ್ಯಾತ ಸಂಗೀತ ಕಲಾವಿದರಾಗಿದ್ದ ಮಹಾರಾಜ ಶ್ರೀ ಸ್ವಾತಿ ತಿರುನಾಳರ 200ನೆ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ಡಾ. ಹೆಗ್ಗಡೆ, ಸಂಗೀತ ಕ್ಷೇತ್ರಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು. ಮಹಾರಾಜ ಶ್ರೀ ಪದ್ಮನಾಭ ದಾಸ ಡಾ. ಹೆಗ್ಗಡೆ ಅವರವನ್ನು ಸನ್ಮಾನಿಸಿದರು. ಜನ್ಮದಿನಾಚರಣೆಯ ಅಂಗವಾಗಿ ಏ.26 ರಿಂದ ಮೇ 25 ರ ವರೆಗೆ ನೃತ್ಯ ಮತ್ತು ಸಂಗೀತ ಉತ್ಸವ ಆಚರಿಸಲಾಗುತ್ತಿದೆ.
'ಚೀಟಿ ವ್ಯವಹಾರ' ಲೋಕಾಯುಕ್ತ ದೂರು: ವಿಜಯ ಸಂಕೇಶ್ವರ ಕ್ರಮಕ್ಕೆ ಡೀವಿ ಸ್ವಾಗತ
ಸುಳ್ಯ: ಕೆಜೆಪಿ ಮುಖಂಡ ವಿಜಯ ಸಂಕೇಶ್ವರ ಅವರು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಮೇಲೆ ಮಾಡಿದ ಚೀಟಿ ವ್ಯವಹಾರದ ಆರೋಪದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ ಕ್ರಮವನ್ನು ಸದಾನಂದ ಗೌಡ ಸ್ವಾಗತಿಸಿದ್ದಾರೆ.
ಸುಳ್ಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪ ಮಾಡಿದ ಅರ್ಧ ಗಂಟೆಯಲ್ಲೇ ನಾನು ಈ ಕುರಿತು ಸೂಕ್ತ ದಾಖಲೆಗಳೊಂದಿಗೆ ತನಿಖೆಗೆ ಆಗ್ರಹಿಸುವಂತೆ ಹೇಳಿದ್ದೇನೆ. ಹಾಗೆ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದೇನೆ. ಈ ಬೆದರಿಕೆಗೆ ಮಣಿದ ಅವರು ದೂರು ನೀಡಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಯಾರ್ಯಾರ ಹೆಸರಲ್ಲಿ ಚೀಟಿ ತಯಾರು ಮಾಡಿ ಆರೋಪ ಮಾಡುವವರೇ ಅದಕ್ಕೆ ದಾಖಲೆ ಒದಗಿಸುವ ಜವಾಬ್ದಾರಿ ಹೊಂದಿದ್ದಾರೆ. ಯಾರ್ಯಾರದೋ ಇಂಥ ಚೀಟಿಗಳೆಲ್ಲ ನನ್ನ ಡಸ್ಟ್ ಬಿನ್ನಲ್ಲಿ ಸಾಕಷ್ಟಿವೆ ಎಂದು ವ್ಯಂಗ್ಯವಾಡಿದರು.