ಬೈಕಂಪಾಡಿ ಲಾರಿ ಚಾಲಕ ಕೊಲೆ: ಶಂಕಿತ ಸೆರೆ
ಮಂಗಳೂರು: ಬೈಕಂಪಾಡಿಯಲ್ಲಿ ಲಾರಿ ಚಾಲಕರಿಗೆ ಚೂರಿಯಿಂದ ಇರಿದು ಸುಲಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬೇರೆ ರಾಜ್ಯದಿಂದ ಸರಕು ಹೇರಿಕೊಂಡು ಬರುವ ಲಾರಿ ಚಾಲಕರು ಮತ್ತು ಕ್ಲೀನರ್ಗಳನ್ನೇ ಗುರಿಯಾಗಿಸಿ ಯುವಕರು ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಬೈಕ್ ನಂಬರ್ ಪ್ಲೇಟ್ ತೆಗೆದಿರಿಸಿ ಹೆಲ್ಮೆಟ್ ಧರಿಸಿ ಬರುವ ಯುವಕರು ಚೂರಿ ತೋರಿಸಿ ಬೆದರಿಸಿ ಹಣ ಕೀಳುವ ಕೆಲಸ ಮಾಡುತ್ತಿದ್ದರು. ಇದು ಮಾಮೂಲು ಆಗಿತ್ತು.ಪರ ರಾಜ್ಯದವರಾದ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳು ಬಹಿರಂಗವಾಗುತ್ತಿರುವುದೇ ಕಡಿಮೆ. ಕೊಲೆ ಮಾಡುವ ಉದ್ದೇಶ ಇಲ್ಲದಿದ್ದರೂ ಪ್ರತಿ ಭಟಿಸಿದ ಹಿನ್ನೆಲೆಯಲ್ಲಿ ಹಂತಕರು ಜೋರಾಗಿ ಇರಿದ ಪರಿಣಾಮ ರಾಜಸ್ತಾನ ಮೂಲದ ಲಾರಿ ಚಾಲಕ ಮೃತಪಟ್ಟಿದ್ದ. ಕೊಲೆ ನಡೆದ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿದ್ದು, ಪೊಲೀಸರು ಆರೋಪಿಗಳ ಬೆಂಬತ್ತಿದ್ದಾರೆ.
ಬೊಳುಬೈಲು: ಹಿಟಾಚಿ ಸಹಿತ ಟಿಪ್ಪರ್ ಪಲ್ಟಿ
ಸುಳ್ಯ: ಅಡೂರು ಕಡೆಯಿಂದ ಹಿಟಾಚಿ ಹೇರಿಕೊಂಡು ಬರುತ್ತಿದ್ದ ಟಿಪ್ಪರ್ ಬೊಳುಬೈಲಿನಲ್ಲಿ ಚರಂಡಿಗೆ ಪಲ್ಟಿಯಾದ ಘಟನೆ ಬುಧವಾರ ನಡೆದಿದೆ. ಅಡೂರು ಕಡೆಯಿಂದ ತಾಜುದ್ದೀನ್ ಅಜ್ಜಾವರ ಮಾಲೀಕತ್ವದ ಹಿಟಾಚಿಯನ್ನು ಟಿಪ್ಪರ್ನಲ್ಲಿ ಸುಳ್ಯ ಕಡೆಗೆ ಹೇರಿಕೊಂಡು ಬರುತ್ತಿರುವ ವೇಳೆ ಬೊಳುಬೈಲಿನಲ್ಲಿ ಕಾರೊಂದಕ್ಕೆ ಸೈಡ್ ಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾಯಿತು. ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.