ಮಹಿಳೆಗೆ ಕತ್ತಿಯಿಂದ ಹಲ್ಲೆ
ಉಪ್ಪಿನಂಗಡಿ: ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡು ಆಶ್ರಯ ನೀಡಿದ ಮಹಿಳೆಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಬರಂಗಾಯ ಎಂಬಲ್ಲಿ ನಡೆದಿದೆ. ದಿ.ಸಂತೋಷ್ ಎಂಬವರ ಪತ್ನಿ ಭವಾನಿ ಎಂಬವರ ಮನೆಯಲ್ಲಿ ನಡುವಿನಜಾಲು ಎಂಬಲ್ಲಿನ ನಿವಾಸಿ ಸಂತೋಷ್ ಎಂಬಾತ ಆಶ್ರಯ ಪಡೆದಿದ್ದ. ಈತ ತನ್ನ ಪತ್ನಿ ಮೇಲೆ ಕುಪಿತಗೊಂಡು ಮನೆ ಬಿಟ್ಟು ಈ ಮನೆಯಲ್ಲಿ ಆಶ್ರಯ ಪಡೆದಿದ್ದನೆನ್ನಲಾಗಿದೆ. ಇತ್ತೀಚೆಗೆ ಪತ್ನಿ ಬಗ್ಗೆ ಏನೊಂದೂ ಆಸಕ್ತಿ ವಹಿಸದ ಸಂತೋಷ್ ನಡವಳಿಕೆಯನ್ನು ಆಕ್ಷೇಪಿಸಿ, ಪತ್ನಿಗೆ ಧರ್ಮ ಸಮ್ಮತವಾಗಿ ನೀಡಬೇಕಾದ ಸಂಸಾರಿಕ ಬದುಕು ನೀಡಬೇಕೆಂದು ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡ ಸಂತೋಷ್ ಮನೆಯಲ್ಲಿದ್ದ ತರ್ಕತ್ತಿ (ಶೇಂದೀ ತೆಗೆಯುವ ಹರಿತವಾದ ಕತ್ತಿ) ಯಿಂದ ಭವಾನಿಯ ಬೆನ್ನಿಗೆ ಬಲವಾಗಿ ಗಾಯ ಮಾಡಿದ್ದನು. ಗಂಭೀರವಾಗಿ ಗಾಯಗೊಂಡ ಭವಾನಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲುಗೊಂಡು ಚಿಕಿತ್ಸೆಗೆ ಒಳಗಾಗಿದ್ದಾರೆ. ಇತ್ತ ಆರೋಪಿ ಸಂತೋಷ್ ತಲೆ ಮರೆಸಿಕೊಂಡಿದ್ದಾನೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೇಣು ಬಿಗಿದು ವೃದ್ಧೆ ಆತ್ಮಹತ್ಯೆ
ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಆತ್ಮಹತ್ಯೆಮಾಡಿಕೊಂಡ ಘಟನೆ ಇಲ್ಲಿನ ಕುರ್ಕಾಲು ಗ್ರಾಮದ ಪುಲೇದು ಮೇಲ್ಮನೆ ಎಂಬಲ್ಲಿ ಮಂಗಳವಾರ ನಡೆದಿದೆ. ನೇತ್ರಾವತಿ ಶೆಟ್ಟಿ (70) ಮೃತರು. ಇವರು ಹಲವಾರು ವರ್ಷಗಳಿಂದ ಕಾಲು ನೋವಿನ ಅಸೌಖ್ಯದಿಂದ ಬಳಲುತ್ತಿದ್ದು ಇದಕ್ಕೆ ಚಿಕಿತ್ಸೆ ಪಡೆದರೂ ಕಾಲು ನೋವು ಗುಣಮುಖವಾಗದೇ ಇದ್ದ ಕಾರಣ ಮಂಗಳವಾರ ರಾತ್ರಿ ಮನೆಯ ಮಾಡಿನ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಿವರಾಮ ಶೆಟ್ಟಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ನಾಪತ್ತೆ: ದೂರು
ಉಡುಪಿ: ಹಿರಿಯಡ್ಕದ ಮದಗ ಎಂಬಲ್ಲಿ ಯುವಕ ಕಾಣೆಯಾಗಿರುವ ಘಟನೆ ಭಾನುವಾರ ನಡೆದಿದೆ. ಕಾಣೆಯಾದವರು ರಾಘವೇಂದ್ರ ಶೆಟ್ಟಿ (25). ಅವರು ಭಾನುವಾರ ಇಲ್ಲಿನ ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆಯುವ ರಥೋತ್ಸವ ನೋಡಿ ಬರುವುದಾಗಿ ಬೈಕಿನಲ್ಲಿ ಹೋಗಿದ್ದು, ನಂತರ ಸ್ನೇಹಿತರ ಮನೆಗೂ ಹೋಗದೆ, ವಾಪಾಸು ಮನೆಗೂ ಬಾರದೆ ಕಾಣೆಯಾಗಿರುತ್ತಾನೆ. ಈ ಬಗ್ಗೆ ಜನಾರ್ದನ ಕಾಮತ್ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.