ಸುಪ್ರೀಂ ಛೀಮಾರಿಯಿಂದ 'ಕೈ'ಗೆ ಹೊಡೆತ: ಸದಾನಂದಗೌಡ
ಸುಳ್ಯ: ಸಿಬಿಐಯನ್ನು ಕೈಗೊಂಬೆಯಾಗಿ ದುರ್ಬಳಕೆ ಮಾಡಿಕೊಂಡು ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದರಿಂದ ಕಾಂಗ್ರೆಸ್ ಮುಖಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದು ಕಾಂಗ್ರೆಸ್ ವಿರೋಧಿ ಅಲೆಗೆ ಕಾರಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್...ಹೀಗೆ ಒಬ್ಬರ ವಿರುದ್ಧ ಇನ್ನೊಬ್ಬರು ಮಸಲತ್ತು ನಡೆಸುತ್ತಿದ್ದಾರೆ. ಹೀಗಾಗಿ ಜನರಿಗೆ ಅದರ ಮೇಲಿನ ವಿಶ್ವಾಸ ಹೊರಟುಹೋಗಿದೆ. ಆ ಪಕ್ಷದ ಕೇಂದ್ರ ನಾಯಕರು ಇಲ್ಲಿಗೆ ಬಂದು ರಾಜ್ಯವನ್ನು ಟಾರ್ಗೆಟ್ ಮಾಡಿ ತಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿ 5 ವರ್ಷ ನಡೆಸಿದ ಸಾಧನೆ ಆಧಾರದಲ್ಲಿ ಮತ ಯಾಚನೆ ಮಾಡುತ್ತಿದೆ ಎಂದು ಹೇಳಿದರು.