ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಧರ್ಮಸ್ಥಳದಲ್ಲಿ 180 ಜೋಡಿಗೆ ಕಂಕಣಭಾಗ್ಯ ಗೋಧೂಳಿ ಲಗ್ನದಲ್ಲಿ 42ನೇ ಸಾಮೂಹಿಕ ವಿವಾಹ

Mainashree
Updated On : 2 May 2013, 11:59 am

ಕನ್ನಡಪ್ರಭ ವಾರ್ತೆ  ಬೆಳ್ತಂಗಡಿ  ಮೇ 2
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ 42ನೇ ಉಚಿತ ಸಾಮೂಹಿಕ ವಿವಾಹ 6.48ರ ಗೋಧೋಳಿ ಲಗ್ನದಲ್ಲಿ ನಡೆದು, 180 ಜೋಡಿಗಳು ವಿವಾಹ ಬಂಧನಕ್ಕೆ ಕಾಲಿರಿಸಿದರು.  ಕ್ಷೇತ್ರದ ಪರಂಪರೆಯಾಗಿ ಪರಿವರ್ತನೆಯಾಗಿರುವ ಈ ಸಮಾರಂಭದಲ್ಲಿ ನ್ಯಾಯಮೂರ್ತಿಗಳು, ಚಲನಚಿತ್ರ ನಟರು, ಉದ್ಯಮಿಗಳು, ಧರ್ಮಾಧಿಕಾರಿಗಳು ಉಪಸ್ಥಿತರಿದ್ದು, ನೂತನ ವಧೂವರರಿಗೆ ಶುಭ ಹಾರೈಸಿದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಮಾತನಾಡಿ, ಎಲ್ಲ ವ್ಯಕ್ತಿಗಳು ಸಮಾನ ಜೀವನ ಕಾಣುವಂತಾಗಬೇಕು. ಶ್ರೀ ಕ್ಷೇತ್ರ ಇದಕ್ಕೆ ಪೂರಕ ಕಾರ್ಯ ಮಾಡುತ್ತಿದೆ. ಇಲ್ಲಿನ ಆದರ್ಶ ಎಲ್ಲೆಡೆ ಪಾಲನೆಯಾಗಬೇಕು ಎಂದು ಆಶಿಸಿದರು.
ಸಂಬಂಧ ವಿಮುಖ ಸಮಾಜ- ಹೆಗ್ಗಡೆ ವಿಷಾದ: ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಿನಿಮಾ, ಟಿವಿ ಮಾಧ್ಯಮಗಳಿಂದ ಧರ್ಮ, ಅರ್ಥ, ಕಾಮದ ಅರ್ಥವೇ ಅನರ್ಥವಾಗಿದೆ. ಈ ತ್ರಿವರ್ಗದ ಪಾಲನೆಯನ್ನು ಯಾವ ರೀತಿ ಮಾಡುವುದು, ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬುದನ್ನು ಮಾಧ್ಯಮಗಳು ತಿಳಿಸುತ್ತಿಲ್ಲದಿರುವುದು ವಿಷಾದನೀಯ ಎಂದರು.

ವಧೂ ವರರ ಮೆರವಣಿಗೆ
ವಧೂ- ವರರನ್ನು ಭವ್ಯವಾದ ಮೆರವಣಿಗೆಯಲ್ಲಿ ಕರೆತರಲಾಯಿತು. ವಧೂವರರಿಗೆ ಕರಿಮಣಿ ತಾಳಿ, ಸೀರೆ, ರವಿಕೆ, ಕಣ, ಶಾಲು, ಧೋತಿ, ಶರ್ಟ್ಫೀಸ್ಗಳನ್ನು ಅತಿಥಿಗಳು ವಿತರಿಸಿದರು. ಒಟ್ಟು ಒಂದು ಜೋಡಿಗೆ ರು. 9,400 ಖರ್ಚು ತಗುಲಿದೆ. ಧರ್ಮಸ್ಥಳ ಗ್ರಾಮೀಣ ಯೋಜನೆ ಸಿಬ್ಬಂದಿ ಶಿಗ್ಗಾಂವ್ನ ರೇವಣ ಸಿದ್ದಪ್ಪ, ರೇಣುಕಾ 11501ನೇ ಜೋಡಿಯಾಗಿ ಹಸೆಮಣೆ ಏರಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ತಲಾ 39 ಜೋಡಿಗಳು, ಚಿಕ್ಕಮಗಳೂರಿನಿಂದ 11, ಶಿವಮೊಗ್ಗ 19, ಹಾಸನ 7, ಬೆಂಗಳೂರು 5, ಮೈಸೂರು 10, ಹಾವೇರಿ 6, ಬೆಳಗಾವಿ 2, ಕೊಡಗು 3, ದಾವಣಗೆರೆ 3, ಧಾರವಾಡ 7, ಉತ್ತರ ಕನ್ನಡ 12, ಚಿತ್ರದುರ್ಗ 2 ಹಾಗೂ ಮಂಡ್ಯ, ಕೊಪ್ಪಳ, ಬಾಗಲಕೋಟೆ, ಚಾಮರಾಜನಗರ ಜಿಲ್ಲೆಗಳಿಂದ ತಲಾ 3 ಜೋಡಿಗಳು ಹಾಗೂ ಕೇರಳದಿಂದ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement