ಬಿಜೆಪಿ ಅಧಿಕಾರಕ್ಕೆ ಬಂದ್ರೆ ರಾಜಕೀಯ ನಿವೃತ್ತಿ: ಪೂಜಾರಿ
ಕ.ಪ್ರ. ವಾರ್ತೆ ಮಂಗಳೂರು ಮೇ 2
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಘೋಷಿಸಿರುವ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜಕೀಯ ನಿವೃತ್ತಿ ಪ್ರಕಟಿಸಲು ಸಿದ್ಧರಿದ್ದಾರೆಯೇ ಎಂದು 48 ಗಂಟೆಯೊಳಗೆ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿಗೆ ನರೇಂದ್ರ ಮೋದಿ ಬಂದದ್ದಕ್ಕೆ ಸ್ವಾಗತ. ಕರಾವಳಿ ಪೂರ್ತಿ ಮೋದಿ ಪ್ರವಾಸ ಮಾಡಬೇಕಿತ್ತು. ಮೋದಿ ಆಗಮನದಿಂದ ಕಾಂಗ್ರೆಸ್ಗೇ ಲಾಭ ಎಂದರು.
ಮೋದಿ ಮಾತನ್ನು ರಾಜ್ಯದ ಜನತೆ ನಂಬುವುದಿಲ್ಲ, ಪ್ರಜ್ಞಾವಂತ ನಾಗರಿಕರು ಕಾಂಗ್ರೆಸ್ಗೆ ಮತ ಹಾಕುತ್ತಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಾಗಿ ಮೋದಿ ಕನಸು ಕಾಣುತ್ತಿದ್ದು, ಇದು ಈ ಬಾರಿ ಸಾಧ್ಯವಿಲ್ಲ ಎಂದರು.
ಪೂಜಾರಿ ಬಾಯಲ್ಲಿ ದರಿದ್ರ, ದಡ್ಡ ಮಾತು: ಟೀಕಿಸುವ ಭರದಲ್ಲಿ ಪೂಜಾರಿ, ಮೋದಿ ದರಿದ್ರ, ದಡ್ಡ ಎಂದೆಲ್ಲ ಅವಹೇಳನ ಮಾಡಿದರು. ಚುನಾವಣಾ ಪ್ರಚಾರದಲ್ಲಿ ಕೇಂದ್ರದ ಬಗ್ಗೆ ಮಾತ್ರ ಮಾತನಾಡುವ ಮೋದಿ, ರಾಜ್ಯದಲ್ಲಿನ ಭ್ರಷ್ಟಾಚಾರ ಬಗ್ಗೆ ಮೌನ ವಹಿಸುವುದು ಯಾಕೆ ಎಂದು ಪ್ರಶ್ನಿಸಿದರು. ಮೋದಿ ಭಾಷಣ ಮಾಡಿದ ವೇದಿಕೆಯಲ್ಲಿ ಮಾಜಿ ಸಿಎಂ ಸದಾನಂದಗೌಡರ ಸಹಿತ ಭ್ರಷ್ಟಾಚಾರ, ಕಳಂಕಿತರಿದ್ದರೂ ಮೋದಿಗೆ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ ಪೂಜಾರಿ, ಕೋಮು ಭಾಷಣ ಮೂಲಕ ರಾಜ್ಯದಲ್ಲಿ ಅಶಾಂತಿಗೆ ಮೋದಿ ಕಾರಣರಾಗುತ್ತಾರೆ. ಭವಿಷ್ಯದಲ್ಲಿ ಪ್ರಧಾನಿಯಾಗಲು ಹೊರಟಿರುವ ಮೋದಿಗೆ ಮಾತನಾಡಲು ಬರುತ್ತಿಲ್ಲ ಎಂದು ಹೇಳಿದರು.