ಹೆತ್ತವರ ವಿರೋಧ ಪ್ರೇಮಿಗಳ ಆತ್ಯಹತ್ಯೆ
ಮಂಗಳೂರು: ಹೆತ್ತವರು ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಪ್ರೇಮಿಗಳಿಬ್ಬರೂ ಪ್ರತ್ಯೇಕವಾಗಿ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಬಡಗಎಡಪದವು ಮತ್ತು ಸುರತ್ಕಲ್ನ ಮುಕ್ಕ ಎಂಬಲ್ಲಿ ನಡೆದಿದೆ. ಬಡಗುಎಡಪದವು ಮನೆಯ ಶೈಲೇಶ್ (19) ಪಕ್ಕದ ಮನೆಯ ಸುಮಲ (19)ಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಸುಮಲಳ ಮನೆಯವರಿಗೆ ಗೊತ್ತಾಗಿ ಗಲಾಟೆಯಾಗಿತ್ತು. ಇದರಿಂದ ನೊಂದ ಸುಮಲ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ಅತೀವ ಬೇಸರಗೊಂಡಿದ್ದ ಶೈಲೇಶ್ ತನ್ನ ಅಜ್ಜಿಮನೆಯಾದ ಸುರತ್ಕಲ್ ಮುಕ್ಕದ ದೊಂಬೇಲ್ಗೆ ಬುಧವಾರ ರಾತ್ರಿ 10 ಗಂಟೆಗೆ ತೆರಳಿದ್ದು, ಊಟ ಮುಗಿಸಿ ಕೋಣೆಯೊಂದರಲ್ಲಿ ಮಲಗಿದ್ದ. ಬೆಳಗ್ಗೆಯಾದರೂ ಏಳದಿದ್ದಾಗ ಬಾಗಿಲು ತಟ್ಟಿ, ಮೊಬೈಲ್ಗೆ ರಿಂಗ್ ಕೊಟ್ಟಿದ್ದಾರೆ. ಆಗಲೂ ಪ್ರತಿಕ್ರಿಯೆ ನೀಡದಾಗ ಕೋಣೆಯ ಬಾಗಿಲು ಒಡೆದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸುಮಲ ಆತ್ಮಹತ್ಯೆ ಪ್ರಕರಣ ಬಜ್ಪೆ ಠಾಣೆಯಲ್ಲಿ ದಾಖಲಾಗಿದ್ದು, ಶೈಲೇಶ್ ಆತ್ಮಹತ್ಯೆ ಪ್ರಕರಣ ಸುರತ್ಕಲ್ ಠಾಣೆಯಲ್ಲಿ ದಾಖಲಾಗಿದೆ.