8ನೇ ತರಗತಿ ಹಿ.ಪ್ರಾ. ಶಾಲೆ ವಿಭಾಗಕ್ಕೆ
ಬಂಟ್ವಾಳ: ಈ ವರ್ಷದಿಂದ 8ನೇ ತರಗತಿಯಲ್ಲಿ ಕಲಿಯುವ ಮಕ್ಕಳು ಪ್ರೌಢಶಾಲಾ ವಿಭಾಗಕ್ಕೆ ಸೇರುವುದಿಲ್ಲ, ಬದಲಾಗಿ ಈ ತರಗತಿಯ ವಿದ್ಯಾರ್ಥಿಗಳನ್ನು ಹಿರಿಯ ಪ್ರಾಥಮಿಕ ಶಾಲಾವಿಭಾಗದ ವಿದ್ಯಾರ್ಥಿಗಳು ಎಂದು ಪರಿಗಣಿಸಬೇಕಾಗಿದೆ.
ಏ.24 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಎಸ್.ಆರ್. ಉಮಾಶಂಕರ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, 2013- 14ನೇ ಸಾಲಿನಲ್ಲಿ 8 ರಿಂದ 10 ನೇ ತರಗತಿ ವರೆಗಿನ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ 8ನೇ ತರಗತಿಯನ್ನು ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಎಂದು ಪರಿಗಣಿಸಿ ಪ್ರತ್ಯೇಕ ದಾಖಲೆಗಳನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆ.
ನಿರ್ವಹಣೆ ಹೇಗೆ?: ಪ್ರೌಢಶಾಲೆಯೊಳಗಿನ ಕಟ್ಟಡದೊಳಗೆ ಮಕ್ಕಳು ಕಲಿಯುತ್ತಿದ್ದರೂ ಅವರನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಬೇಕು, ದಾಖಲಾತಿ ಪುಸ್ತಕ, ಹಾಜರಾತಿ ಪುಸ್ತಕ ಹಾಗೂ ಇನ್ನಿತರ ಪುಸ್ತಕಗಳನ್ನು ಪ್ರತ್ಯೇಕವಾಗಿಯೇ ನಿರ್ವಹಿಸಬೇಕಾಗಿದೆ. ಪ್ರೌಢಶಾಲೆಯಲ್ಲಿರುವ ಶಿಕ್ಷಕರೇ 8ನೇ ತರಗತಿಯ ವಿದ್ಯಾರ್ಥಿಗಳಿಗೂ ಪಾಠ ಮಾಡಬೇಕು, 8, 9, 10ನೇ ತರಗತಿಯ ಉಸ್ತುವಾರಿಯನ್ನು ಮುಖ್ಯಶಿಕ್ಷಕರೆ ನೋಡಿಕೊಳ್ಳಬೇಕು ಹಾಗೂ ಶಾಲೆಯ ಎಲ್ಲ ಮೂಲಭೂತ ಸೌಲಭ್ಯಗಳು ಹಾಗೆಯೇ ಮುಂದುವರಿಯುತ್ತದೆ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ 2013- 14ನೇ ಸಾಲಿನಲ್ಲಿ 8ನೇ ತರಗತಿಯಿಂದ ವಿದ್ಯಾರ್ಥಿಯು ತೇರ್ಗಡೆ ಹೊಂದಿದಲ್ಲಿ ಆ ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣ ಪತ್ರವನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕರು ನೀಡಿ 9 ನೇ ತರಗತಿಗೆ ಪ್ರತ್ಯೇಕವಾಗಿ ದಾಖಲಾತಿ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳುವುದನ್ನು ಹೊರತುಪಡಿಸಿ ಉಳಿದಂತೆ ಬೇರಾವುದೇ ಬದಲಾವಣೆ ಇಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಈಗಾಗಲೇ 4000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆರಂಭಗೊಂಡಿರುವ 8ನೇ ತರಗತಿಯ ನಿರ್ವಹಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಶಾಲೆಗಳಲ್ಲಿ 1ರಿಂದ 8ನೇ ತರಗತಿಗಳು ಮುಂದುವರಿಯಲಿದೆ ಎಂದವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಉನ್ನತೀಕರಣಕ್ಕೆ ತಾತ್ಕಾಲಿಕ ತಡೆ
2013- 14ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7 ನೇ ತರಗತಿಗಳು ನಡೆಸುತ್ತಿದ್ದಲ್ಲಿ ಅದೇ ಶಾಲೆಯಲ್ಲಿ ಹೊಸದಾಗಿ 8ನೇ ತರಗತಿಯನ್ನು ಉನ್ನತೀಕರಿಸುವುದಕ್ಕೆ ಇಲಾಖೆ ತಾತ್ಕಾಲಿಕ ತಡೆ ನೀಡಿದೆ. ಆದರೆ ಅನುದಾನ ರಹಿತ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಯವರು 8ನೇ ತರಗತಿ ಆರಂಭಿಸಲು ಇಚ್ಚಿಸಿದಲ್ಲಿ ಉಪ ನಿರ್ದೇಶಕರು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯವರು ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವ ಹಾಗೂ ಅಗತ್ಯ ತರಬೇತಿ ಹೊಂದಿರುವ ಶಿಕ್ಷಕರನ್ನು ಶಾಲೆಗೆ ಒದಗಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆಂಗ್ಲಮಾಧ್ಯಮ ಹಾಗೂ ಇತರ ಮಾಧ್ಯಮದ ಶಾಲೆಗಳು 8ನೇ ತರಗತಿ ಉನ್ನತೀಕರಿಸಲು ಇದೇ ಕ್ರಮ ಅನುಸರಿಸಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.