ಎಂಜಿನಿಯರಿಂಗ್ ವಿದ್ಯಾರ್ಥಿ ಮಲ್ಪೆ ಸಮುದ್ರಪಾಲು
ಮಲ್ಪೆ: ಇಲ್ಲಿನ ಸೇಂಟ್ ಮೇರಿಸ್ ದ್ವೀಪಕ್ಕೆ ವಿಹಾರಕ್ಕೆಂದು ಬಂದ ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರು ತಿಲಕರಾಜ್ (22).
ಈತ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಗೇಶ್ ಎಂಬವರ ಮಗ, ಮಂಗಳೂರಿನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ.
ಇವರು ಶುಕ್ರವಾರ ಬೆಳಗ್ಗೆ 14 ಮಂದಿ ಸಹಪಾಠಿಗಳೊಂದಿಗೆ ದ್ವೀಪಕ್ಕೆ ಹೋಗಿದ್ದರು. ಅಲ್ಲಿ ನೀರಲ್ಲಿ ಆಟ ಆಡುತ್ತಾ ತಿಲಕ್ ರಾಜ್ ಮತ್ತು ಇನ್ನೊಬ್ಬ ಸಹಪಾಠಿ ಸುದೇಶ್ ಎಂಬವರು ಮಧ್ಯಾಹ್ನ 1.30 ಗಂಟೆಗೆ ನೀರಿನ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಹೋದರು. ತಕ್ಷಣ ಇತರರು ಸೇರಿ ಸುದೇಶ್ನನ್ನು ಮೇಲಕ್ಕೆ ಎಳೆತಂದರಾದರೂ, ತಿಲಕರಾಜ್ ಮಾತ್ರ ನೀರಲ್ಲಿ ಮುಳುಗಿ ಕಾಣೆಯಾಗಿದ್ದಾನೆ. ಪ್ರಜ್ಞೆ ಕಳೆದುಕೊಂಡಿದ್ದ ಸುದೇಶ್ನನ್ನು ಉಡುಪಿಯ ಟಿ. ಎಂ.ಎ. ಪೈ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು ಚೇತರಿಸಿಕೊಂಡಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾ ಪಲ್ಟಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಪುತ್ತೂರು: ಆಪೆ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮೃತಪಟ್ಟು, ಚಾಲಕ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪಂಚೋಡಿ ಎಂಬಲ್ಲಿ ಸಂಭವಿಸಿದೆ. ಈಶ್ವರಮಂಗಲದಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚಡವು ನಿವಾಸಿ ಸಿರಾಜುದ್ದೀನ್ ಅವರ ಪುತ್ರ, ಈಶ್ವರಮಂಗಲದ ಪಂಚಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಮನ್ಸೂರು (15) ಮೃತ ಬಾಲಕ. ಮನ್ಸೂರ್ ಕಳೆದ ಪರೀಕ್ಷೆಯಲ್ಲಿ 9ನೇ ತರಗತಿಯಿಂದ 10ನೇ ತರಗತಿಗೆ ತೇರ್ಗಡೆ ಹೊಂದಿದ್ದರು. ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚಡವು ನಿವಾಸಿಯಾದ ಹಾರೀಸ್ ಗಾಯಗೊಂಡಿದ್ದಾರೆ. ಈಶ್ವರಮಂಗಲ ಪಳ್ಳತ್ತೂರು ರಸ್ತೆಯಲ್ಲಿ ಹೋಗುತ್ತಿದ್ದ ಆಪೆ ರಿಕ್ಷಾ ಪಂಚೋಡಿ ಸಮೀಪ ಹತೋಟಿ ತಪ್ಪಿ ಪಲ್ಟಿಯಾಯಿತೆಂದು ತಿಳಿದು ಬಂದಿದೆ. ಮೃತ ಮನ್ಸೂರು ಚಾಲಕ ಹಾರೀಸ್ರ ಸಹೋದರಿಯ ಪುತ್ರ.