ಚಾಲಕರಿಗೆ ಇರಿದು ಸುಲಿಗೆ: ಇಬ್ಬರು ಹಂತಕರ ಸೆರೆ
ಮಂಗಳೂರು: ಬೈಕಂಪಾಡಿಯಲ್ಲಿ ಇರಿದು ಕೊಲೆ ಮಾಡಿ ಹಣ ಸುಲಿಗೆ ನಡೆಸಿದ ಇಬ್ಬರು ಹಂತಕರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಳವಾರು ಕುರ್ಸುಗುಡ್ಡೆ ರೋಲ್ಸನ್ ರೆಬೆಲ್ಲೋ ಅಲಿಯಾಸ್ ಪುಟ್ಟ (20), ಕಾಟಿಪಳ್ಳ ಮಹಮ್ಮದ್ ಸಾದಿಕ್ (17) ಬಂಧಿತರು. ಏ.29ರಂದು ಬೈಕಂಪಾಡಿ ಪ್ರದೇಶದಲ್ಲಿ ಬೈಕ್ನಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದ ಇವರಿಬ್ಬರು ಮೂರು ಮಂದಿಗೆ ಚೂರಿಯಿಂದ ಇರಿದು ಹಣ ದೋಚಿದ್ದರು. ಇರಿತದಿಂದ ರಾಜಸ್ತಾನ ಮೂಲದ ಇಸ್ಮಾಯಿಲ್ ಖಾನ್ (21) ಮೃತಪಟ್ಟಿದ್ದರು.
ವಿಟ್ಲ:ಅಪ್ರಾಪ್ತ ಬಾಲಕಿಯನ್ನು ತನ್ನ ರಿಕ್ಷಾದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬ ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಶುಕ್ರವಾರ ಸಂಜೆ ಸಾಲೆತ್ತೂರು ಸಮೀಪ ನಡೆದಿದೆ. ಕೇರಳ ಗಡಿಯ ಮಂಜೇಶ್ವರ ಪ್ರದೇಶದ ತಲೆಕ್ಕಿ ನಿವಾಸಿಯ ಬಾಲಕಿ (12) ಮೀನು ತರಲೆಂದು ಸಾಲೆತ್ತೂರಿಗೆ ಬಂದಿದ್ದು, ಮರಳುವ ಸಂದರ್ಭ ತಲೆಕ್ಕಿ ಮಾರ್ಗವಾಗಿ ಬಾಕ್ರಬೈಲು ಕಡೆ ತೆರಳುವ ರಿಕ್ಷಾ ಎಂದು ನಂಬಿಸಿದ ಸಾಲೆತ್ತೂರು ನಿವಾಸಿ ಜಯಂತ (22), ಆಕೆಯನ್ನು ನಿರ್ಜನ ಪ್ರದೇಶವಾದ ಕೂಡು ರಸ್ತೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಮಯ ಬಾಲಕಿ ಬೊಬ್ಬೆ ಹಾಕಿದ್ದನ್ನು ಕೇಳಿಸಿದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದಾಗ ಅತ್ಯಾಚಾರದ ವಿಚಾರ ತಿಳಿದು ರಿಕ್ಷಾ ಚಾಲಕನಿಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ. ವಿಟ್ಲ ಮತ್ತು ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆ ನಡೆದ ಸ್ಥಳ ಕರ್ನಾಟಕ, ಕೇರಳ ಗಡಿಯಾಗಿದ್ದು ಬಾಲಕಿ ಕೇರಳ ಮೂಲದವಳಾದ್ದರಿಂದ ಪ್ರಕರಣವನ್ನು ಮಂಜೇಶ್ವರ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.