ಚುನಾವಣೆ ರಾಜಕಾರಣಿಗಳಿಗೆ ಪಾಠ ಕಲಿಸುವ ದಿನವಾಗಲಿ: ಪೂಜಾರಿ
ಸುಳ್ಯ: ಚುನಾವಣೆ ರಾಜಕಾರಣಿಗಳಿಗೆ ಪಾಠ ಕಲಿಸುವ ದಿನವಾಗಬೇಕು. ಮತದಾರರು ನಾಯಕರು. ಜನಪ್ರತಿನಿಧಿಗಳು ಸೇವಕರು. ಇದನ್ನು ತಿಳಿದು ಮತದಾನ ಮಾಡಿ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದರು. ಅವರು ಶುಕ್ರವಾರ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರವು ರಾಜ್ಯದ ಸಂಪತ್ತನ್ನು ಲೂಟಿ ಮಾಡಿದೆ. ಅನೇಕ ಸಚಿವರು ಭ್ರಷ್ಟಾಚಾರದ ಆರೋಪ ಹೊತ್ತು ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿಯೊಬ್ಬರು ಜೈಲು ಸೇರಿ ಇತಿಹಾಸ ನಿರ್ಮಿಸಿದ್ದಾರೆ. ಆದುದರಿಂದ ಪ್ರಜ್ಞಾವಂತ ಮತದಾರ ಸೂಕ್ಷ್ಮ ಪ್ರಜ್ಞೆಯಿಂದ ತನ್ನ ಮತವನ್ನು ಚಲಾಯಿಸಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ಗೂ ಪಾಠ: ಜನತೆ ನೀಡಿದ ಅವಕಾಶವನ್ನು ಬಿಜೆಪಿಯವರು ದುರ್ಬಳಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನತೆ ಈ ಬಾರಿ ಆಶೀರ್ವದಿಸಲಿದ್ದು, ಮುಂದಿನ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ನ ಯಾರಾದರೂ ತಪ್ಪು ಮಾಡಿದರೆ ಅವರನ್ನೂ ತಿರಸ್ಕರಿಸಿ ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಿಗದಿಯಾಗಿದ್ದ ರೋಡ್ ಶೋ ಕಾರ್ಯಕ್ರಮ ಪೊಲೀಸ್ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ರದ್ದುಗೊಂಡಿತು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ನ.ಪಂ. ಸದಸ್ಯ ಮುಸ್ತಾಫ, ಎಸ್. ಸಂಶುದ್ದೀನ್, ಸುಧೀರ್ ರೈ ಮೇನಾಲ ಮತ್ತಿತರರು ಇದ್ದರು.