ನಿಷೇಧಾಜ್ಞೆ ಜಾರಿ
ಮಂಗಳೂರು: ಜಿಲ್ಲೆಯಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮೇ 3 ರಂದು ಸಂಜೆ 5 ರಿಂದ ಮೇ 6ರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ. ಆದ್ದರಿಂದ ಚುನಾವಣೆ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಗುಂಪು ಗುಂಪಾಗಿ ರ್ಯಾಲಿ ಮೂಲಕ ಮತಯಾಚಿಸುವುದನ್ನು ತಡೆಯಲಾಗಿದೆ. ಜಿಲ್ಲೆಯಲ್ಲಿ ಮೇಲೆ ತಿಳಿಸಿದ ಅವಧಿಯಲ್ಲಿ ಸಾರ್ವಜನಿಕರು 5 ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ, ಬೀದಿ, ಓಣಿ ಕೇರಿಗಳಲ್ಲಿ , ಸಾರ್ವಜನಿಕ ಸ್ಥಳ, ಕಟ್ಟಡ ಮತ್ತು ಮತದಾನ ಕೇಂದ್ರಗಳ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಿದೆ. ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಜಿ ಇವುಗಳನ್ನು ಹೊಂದಿರುವುದನ್ನು ನಿಷೇಧಿಸಿದೆ. ಜಿಲ್ಲಾಧಿಕಾರಿ ಅನುಮತಿ ಪಡೆಯದೆ ಮೆರವಣಿಗೆ, ಸಾರ್ವಜನಿಕ ಸಭೆ, ಸಮಾರಂಭ, ಸಂಜ್ಞೆ, ಯಾವುದೇ ಕೂಗನ್ನು ಉಚ್ಚರಿಸುವುದನ್ನು , ಚಿತ್ರಗಳ ಮೂಲಕ, ಪ್ರಕಟಣೆ ಮೂಲಕ ಪ್ರಸಾರ ಮಾಡುವುದನ್ನು, ಬಿತ್ತಿ ಪತ್ರ ಅಂಟಿಸುವುದನ್ನು ನಿಷೇಧಿಸಲಾಗಿದೆ. ನಾಲ್ಕು ಮತ್ತು ಅದಕ್ಕಿಂತ ಕಡಿಮೆ ಜನ ಮನೆ ಮನೆಗೆ ತೆರಳಿ ಮತಯಾಚಿಸುವುದಕ್ಕೆ ನಿರ್ಬಂಧವಿಲ್ಲ. ಈ ಆದೇಶವು ಸರ್ಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಿಗೆ ಮತ್ತು ಆರಕ್ಷಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲು ಬಳಸುವ ಲಾಠಿಗೂ ಹಾಗೂ ಚುನಾವಣೆ ಕಾರ್ಯನಿರತ ಸಿಬ್ಬಂದಿಗಳಿಗೂ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೀಟಿ ವಿತರಣೆ
ವಿಳಂಬಗತಿ...
ಮೂಲ್ಕಿ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಗುರುತಿನಚೀಟಿ ವಿತರಣೆ ಮಂದಗತಿಯಲ್ಲಿ ಸಾಗುತ್ತಿದೆ. ಚುನಾವಣೆಗೆ ಕೇವಲ ಒಂದು ದಿನ ಬಾಕಿಯಿದ್ದು, ಈ ತನಕ ಶೇ.50 ವಿತರಣೆ ಕಾರ್ಯ ಮಾತ್ರ ಆಗಿದೆ.
ಈ ಹಿಂದಿನ ಚುನಾವಣೆಯಲ್ಲಿ ಮತದಾರರಿಗೆ ಗುರುತಿನ ಚೀಟಿಯನ್ನು ರಾಜಕೀಯ ಪಕ್ಷಗಳ ಕಾರ್ಯಕತರು ವಿತರಣೆ ಮಾಡುತ್ತಿದ್ದು ಈ ಬಾರಿ ಚುನಾವಣಾ ಆಯೋಗ ನೇರವಾಗಿ ವಿತರಣೆ ಮಾಡಲು ನಿರ್ಧರಿಸಿದೆ.