ಪುತ್ತೂರು: ಹಸಿರುವಾಣಿ ಹೊರೆಕಾಣಿಕೆಗೆ ಚಾಲನೆ
ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಲ್ಲಿ ಭಾನುವಾರದಿಂದ ಆರಂಭಗೊಳ್ಳುವ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಹಸಿರುವಾಣಿ ಹೊರೆಕಾಣಿಕೆ ಕಾರ್ಯಕ್ರಮಕ್ಕೆ ಒಡಿಯೂರು ಕ್ಷೇತ್ರದ ಸಾದ್ವಿ ಮಾತಾ ಅಮೃತಾನಂದಮಯಿ ಚಾಲನೆ ನೀಡಿದರು. ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೀವಂಧರ್ ಜೈನ್, ಸಂಘಟನಾ ಕಾರ್ಯದರ್ಶಿ ಡಿಂಬ್ರಿ ರಮೇಶ್ ರೈ, ಖಜಾಂಜಿ ಶಶಿಕುಮಾರ್ ರೈ ಬಾಲ್ಯೊಟ್ಟು, ಸದಸ್ಯರಾದ ನವೀನ್, ಕೃಷ್ಣಕುಮಾರ್ ರೈ ತಿಂಗಳಾಡಿ ಗುತ್ತು, ಅಜೇಯ ಆಳ್ವ ಬೊಳ್ಳಮಜಲು, ದೇವಾಲಯದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಜಾರಾಮ ಶೆಟ್ಟಿ , ಸಂತೋಷ್ ಕುಮಾರ್ ನಾಯ್ಕ್, ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು, ಉದ್ಯಮಿ ಪದ್ಮನಾಭ ಶೆಟ್ಟಿ, ಮತ್ತಿತರರು ಇದ್ದರು.
ಇಂದು ಕೊಪ್ಪರಿಗೆ ಮುಹೂರ್ತ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿರುವ ಅಯ್ಯಪ್ಪ ಗುಡಿಯ ನಿರ್ಮಾಣದಿಂದಾಗಿ ಪ್ರಾಯಶ್ಚಿತ ಮಾಡಲು ಮೇ 5ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮತ್ತು ಅಯ್ಯಪ್ಪನ ಗುಡಿಯಲ್ಲಿ ಬೆಳ್ಳಿಯ ಕಲಶದಲ್ಲಿ ನಗದನ್ನು ತುಂಬಿಸಿ ಭದ್ರ ದೀಪವನ್ನು ಅರ್ಪಿಸಲಾಗುವುದು. ಆ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶದ ಅಂಗವಾಗಿ ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಗುವುದು. ಇಂದು ಕೊಪ್ಪರಿಗೆ ಮುಹೂರ್ತ: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 4ರಂದು ಬೆಳಗ್ಗೆ ಕೊಪ್ಪರಿಗೆ ಮುಹೂರ್ತ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮತ್ತು ಕೊಪ್ಪರಿಗೆ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ತಿಳಿಸಿದ್ದಾರೆ.