ಬಹಿರಂಗ ಪ್ರಚಾರಕ್ಕೆ ತೆರೆ
ಪುತ್ತೂರು: ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 6 ಮಂದಿ ಸ್ಪರ್ಧಾ ಕಣದಲ್ಲಿದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಂಡಿರುವ ಕಾರಣ ವಿವಿಧ ಪಕ್ಷಗಳ ಪ್ರಚಾರ ಸಭೆಗಳು, ರೋಡ್ ಶೋಗಳ ಅಬ್ಬರಗಳು ಮುಕ್ತಾಯವಾಗಿದ್ದು ಇದೀಗ ಎಲ್ಲರೂ ಮನೆ ಮನೆಗೆ ತೆರಳಿ ಜನರ ಮನವೊಲಿಸುವ ಪ್ರಯತ್ನದಲ್ಲಿದ್ದಾರೆ. ಆರೋಪ ಪ್ರತ್ಯಾರೋಪಗಳ ಭರಾಟೆಗಳೂ ಮುಗಿದಿದೆ.
ಈ ಬಾರಿ ಪುತ್ತೂರಿನಲ್ಲಿ ಅಭಿವೃದ್ಧಿ ಪರ ಮಾತನಾಡುವ ಬದಲು ಕೇವಲ ಆರೋಪ ಪ್ರತ್ಯಾರೋಪಗಳ ಕಾರುಬಾರು ಬಹಳವಾಗಿತ್ತು. ಮತದಾರರನ್ನು ಒಲಿಸಲು ವಿವಿಧ ಪಕ್ಷಗಳ ವರಿಷ್ಟರಾದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ, ಗಣೇಶ್ ಕಾರ್ಣಿಕ್ ಸೇರಿದಂತೆ ಹಲವು ನಾಯಕರ ದಂಡು ಆಗಮಿಸಿತ್ತು. ಮಾತ್ರವಲ್ಲದೆ ಸಿನಿಮಾ ನಟಿಯರಾದ ತಾರಾ ಮತ್ತು ಭಾವನಾ ಆಗಮಸಿ ಪ್ರಚಾರಕ್ಕೆ ಮೆರುಗನ್ನು ನೀಡಿದ್ದರು.
ಹರಿಹರಪಲ್ಲತ್ತಡ್ಕ:ಕಾಂಗ್ರೆಸ್ನಿಂದ ಮತಯಾಚನೆ
ಸುಬ್ರಹ್ಮಣ್ಯ: ಚುನಾವಣಾ ಪ್ರಚಾರದ ಕೊನೆಯ ದಿನವಾದ ಶುಕ್ರವಾರ ಹರಿಹರಪಲ್ಲತ್ತಡ್ಕದ ಮುಖ್ಯ ಪೇಟೆಯಲ್ಲಿ ಕಾಂಗ್ರೆಸ್ ವತಿಯಿಂದ ಮತಯಾಚನೆ ನಡೆಯಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಂಗಡಿ ಹಾಗೂ ಮನೆಗಳಿಗೆ ತೆರಳಿ ಡಾ. ರಘು ಪರ ಮತ ಯಾಚಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತು ಸದಸ್ಯ ಕೆ.ಎಸ್. ದೇವರಾಜ್, ತಾಲೂಕು ಪಂಚಾಯಿತಿ ಸದಸ್ಯೆ ತಾರಾ ಮಲ್ಲಾರ, ಮುಖಂಡರಾದ ದುರ್ಗಾದಾಸ್ ಮಲ್ಲಾರ, ಸತೀಶ್ ಕೂಜುಗೋಡು, ನಾರಾಯಣ ಪುಳಿಕುಕ್ಕು, ಕೆ.ಪಿ. ಗಿರಿಧರ, ಮುರಳೀಧರ ದೊಡ್ಡಕಜೆ, ಗದಾಧರ ಮಲ್ಲಾರ, ವಸಂತ ಕುಮಾರ್ ಕೆದಿಲ, ಇತರರು ಇದ್ದರು.
ಬೆಳ್ಳಾರೆ: ಕಾಂಗ್ರೆಸ್ ಪಾದಯಾತ್ರೆ
ಸುಳ್ಯ: ಬೆಳ್ಳಾರೆ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮತಯಾಚಿಸಿದರು. ಕೆಪಿಸಿಸಿ ಸದಸ್ಯೆ ರಾಜೀವಿ ಆರ್. ರೈ, ಜಿ.ಪಂ. ಮಾಜಿ ಸದಸ್ಯ ಚಂದ್ರಶೇಖರ ಕಾಮತ್, ಎಂ. ಮಾಧವ ಗೌಡ, ವಿಠಲದಾಸ್, ಕರುಣಾಕರ ಆಳ್ವ, ವಿಶ್ವನಾಥ ರೈ ಕಳಂಜ, ಆನಂದ ಬೆಳ್ಳಾರೆ, ಅಂದುಂಞ ಬೆಳ್ಳಾರೆ ಮುಂತಾದವರು ಇದ್ದರು.
ಬಿಜೆಪಿ ರೋಡ್ ಶೋ...
ಮೂಲ್ಕಿ: ಕಿನ್ನಿಗೋಳಿ ಪೇಟೆಯಲ್ಲಿ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ರೋಡ್ ಶೋ ನಡೆಯಿತು. ಪಕ್ಷದ ಕೆ. ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲು, ಆಶಾ ರತ್ನಾಕರ ಸುವರ್ಣ, ಕಿನ್ನಿಗೋಳಿ ಪಂಚಾಯತ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ: ವಿವಿಧ ಪಕ್ಷಗಳ ಅಂತಿಮ ಕಸರತ್ತು
ಬಂಟ್ವಾಳ: ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬೀಳಲು ಇನ್ನು ಕೆಲವೇ ಗಂಟೆಗಳು ಬಾಕಿ. ಅದಾಗಲೇ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಅಂತಿಮ ಕಸರತ್ತು ನಡೆಸಿದ್ದು, ವಿವಿಧ ರಾಜಕೀಯ ಪಕ್ಷಗಳು, ತಮ್ಮ ಅಭ್ಯರ್ಥಿ ಸಹಿತವಾಗಿ ಗುರುವಾರ ದಿನವಿಡಿ ಬಿ.ಸಿ. ರೋಡಿನಲ್ಲಿ ರೋಡ್ ಶೋ ನಡೆಸಿದ್ದಾರೆ.
ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರವಾಗಿ ಚಿತ್ರನಟಿ ಭಾವನಾ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬಿ.ಸಿ. ರೋಡು ಪರಿಸರದಲ್ಲಿ ರೋಡ್ ಶೋ ನಡೆಸಿದರು. ಅದೇ ವೇಳೆ ಜೆಡಿಎಸ್ ಅಭ್ಯರ್ಥಿ ಕೃಷ್ಣಪ್ಪ ಪೂಜಾರಿ ಪಕ್ಷದ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಅಂಗಡಿ- ಮನೆಗಳಿಗೆ ತೆರಳಿ ಮತಯಾಚಿಸಿದರು.
ಮಧ್ಯಾಹ್ನ ಕೆಜೆಪಿ ಅಭ್ಯರ್ಥಿ ಇಬ್ರಾಹಿಂ ಕೈಲಾರ್ ತಮ್ಮ ಬೆಂಬಲಿಗರೊಂದಿಗೆ ಬಿ.ಸಿ. ರೋಡ್ ಪರಿಸರದಲ್ಲಿ ಮತಯಾಚನೆಗಾಗಿ ಮನೆ-ಅಂಗಡಿಗಳಿಗೆ ಭೇಟಿ ನೀಡಿದರು. ಸಂಜೆ ಎಸ್ಡಿಪಿಐ ಕಾರ್ಯಕರ್ತರು ಅಭ್ಯರ್ಥಿ ಮಜೀದ್ ಖಾನ್ ಪರ ಮತಯಾಚಿಸಿ ಮೆರವಣಿಗೆ ನಡೆಸಿದರು. ಬಿಜೆಪಿ ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಪರವಾಗಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಬಿ.ಸಿ. ರೋಡಿನಲ್ಲಿ ಪಾದಯಾತ್ರೆ ನಡೆಸುವ ಮೂಲಕ ಮತಯಾಚಿಸಿದರು.
ಬಂಟ್ವಾಳ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಆರು ಪಕ್ಷಗಳ ಪೈಕಿ ಐದು ಪಕ್ಷಗಳ ಅಭ್ಯರ್ಥಿಗಳು ಬಿ.ಸಿ. ರೋಡಿನಾದ್ಯಂತ ಗುರುವಾರ ಸಂಚರಿಸಿ ಮತಯಾಚಿಸಿದ್ದಾರೆ. ಕಣದಲ್ಲಿರುವ ಆರ್ಪಿಐ ಪಕ್ಷ ಮಾತ್ರ ಬಹಿರಂಗವಾಗಿ ಯಾವುದೇ ಪ್ರಚಾರ ಸಭೆಗಳನ್ನು ಇದುವರೆಗೂ ನಡೆಸಿಲ್ಲ. ಗುರುವಾರ ವಿವಿಧ ಪಕ್ಷಗಳು ಬಿ.ಸಿ. ರೋಡಿನಲ್ಲಿ ನಡೆಸಿದ ರೋಡ್ ಶೋದಿಂದಾಗಿ ಬಿ.ಸಿ. ರೋಡು ಗುರುವಾರ ಆಗಾಗ ವಾಹನ ದಟ್ಟಣೆಯ ಸಮಸ್ಯೆ ಎದುರಿಸುವಂತಾಯಿತು.