ಚುನಾವಣೆ: ಪೊಲೀಸ್ ಬಿಗಿ ಬಂದೋ ಬಸ್ತ್
ಮಂಗಳೂರು: ಜಿಲ್ಲೆಯಲ್ಲಿ ಚುನಾವಣೆಗೆ ಬಿಗು ಭದ್ರತೆ ವಹಿಸಲಾಗಿದೆ. ಎಲ್ಲೆಲ್ಲೂ ಖಾಕಿ ದಿರಿಸಿನ ಪೊಲೀಸರು, ರೈಫಲ್ ಹಿಡಿದ ಅರೆ ಸೇನಾಪಡೆ ಯೋಧರ ಗಸ್ತು ತಿರುಗುತ್ತಿದ್ದಾರೆ. ಮತಗಟ್ಟೆಗಳಿಗೂ ಭದ್ರತೆ ನೀಡಲಾಗಿದ್ದು, ಮತ ಯಂತ್ರಗಳು ತಲುಪಿವೆ. ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಮತಗಟ್ಟೆ ಕೇಂದ್ರಗಳಲ್ಲಿ ತಂಗಿದ್ದಾರೆ. ಮತದಾನ ನಡೆದ ಬಳಿಕ ಎಲ್ಲ ಮತಯಂತ್ರಗಳನ್ನು ಕೆನರಾ ಕಾಲೇಜಿಗೆ ತಂದು ಬಿಗು ಭದ್ರತೆಯಲ್ಲಿ ಇಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 144 ಸೆಕ್ಷನ್ ಮೂಲಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 5ಕ್ಕಿಂತ ಹೆಚ್ಚು ಮಂದಿ ಗುಂಪುಗೂಡಿ ತಿರುಗಾಡುವುದನ್ನು, ಆಯುಧ ಹೊಂದುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸಭೆಗಳಿಗೂ, ಪ್ರಚೋದನಕಾರಿ ಹಾಡು, ಅಭಿನಯ, ಚಿತ್ರಗಳು, ಮುದ್ರಿತ ಪ್ರಕಟಣೆಗಳಿಗೆ ನಿಷೇಧ ಹೇರಲಾಗಿದೆ.