ನ್ಯಾಯಯುತ ಚುನಾವಣೆಗೆ ಸಕಲ ಸಿದ್ಧತೆ
ಪುತ್ತೂರು/ಸುಳ್ಯ/ಬೆಳ್ತಂಗಡಿ: ಇಲ್ಲಿನ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಎದುರಿಸಲು ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದು, ಪುತ್ತೂರಿನ ತೆಂಕಿಲದ ವಿವೇಕಾನಂದ ಫ್ರೌಡಶಾಲೆಯಲ್ಲಿ ಚುನಾವಣಾ ಪೂರ್ವಭಾವಿಯಾಗಿ ಶನಿವಾರ ಮಸ್ಟರಿಂಗ್ ಕಾರ್ಯ ನಡೆಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ 210 ಮತಗಟ್ಟೆಗಳಿಗೆ 1050 ಚುನಾವಣಾ ಸಿಬ್ಬಂದಿ ನೇಮಿಸಲಾಗಿದೆ. 541 ಮಂದಿ ಸಿಆರ್‌ಪಿಎಫ್, ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಸಿಬ್ಬಂದಿ ಮತಗಟ್ಟೆ ಹಾಗೂ ಚುನಾವಣಾ ಸಂಚಾರಿ ಕರ್ತವ್ಯ ನಡೆಸಲಿದ್ದಾರೆ. ವಿಧಾನಸಭಾ ಕ್ಷೇತ್ರದಲ್ಲಿ 22 ಅತಿ ಸೂಕ್ಷ್ಮ ಹಾಗೂ 40 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು, ಅತಿ ಸೂಕ್ಷ್ಮದಲ್ಲಿ ಹೆಡ್ ಕಾನ್‌ಸ್ಟೇಬಲ್‌ಗಳು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮೂರು ಮಂದಿ ಜಿಲ್ಲಾ ಮಟ್ಟದ ಅಧಿಕಾರಿಗಳು ವಲಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲಿದ್ದು, 17 ಮಂದಿ ವಲಯ ಮಟ್ಟದ ಅಧಿಕಾರಿಗಳೂ ಮತ್ತು ಕೇಂದ್ರ ಸರ್ಕಾರದ ನೌಕರರಾಗಿರುವ 29 ಮಂದಿ ಮೈಕ್ರೋ ಅಬ್ಸರ್ವರ್ಸ್ ಕ್ಷೇತ್ರಾದ್ಯಂತ ಚುನಾವಣೆಯತ್ತ ಗಮನಹರಿಸಲಿದ್ದಾರೆ.
ವೆಬ್ ಕ್ಯಾಮೆರಾ ಮೂಲಕ ಮತದಾನ ಪ್ರಕ್ರಿಯೆ ಹಾಗೂ ಮತಗಟ್ಟೆಗಳ ಪ್ರದೇಶದ ಸ್ಥಿತಿಗತಿಯನ್ನು ದಾಖಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳಲ್ಲಿರುವ ಸ್ಮಾರ್ಟ್ ಫೋನ್ ಮೂಲಕ ಕ್ಷಣ ಕ್ಷಣದ ಮಾಹಿತಿ ಚುನಾವಣಾ ಆಯೋಗದ ವೆಬ್‌ನಲ್ಲಿ ದಾಖಲಿಸಲಾಗುತ್ತಿದೆ. ರಾಜಸ್ಥಾನದ ಐಎಫ್‌ಎಸ್ ಅಧಿಕಾರಿ ರಾಮ್‌ಕುಮಾರ್ ಜನರಲ್ ಅಬ್ಸರ್ವರ್ ಆಗಿದ್ದು ವಿನಿಷ್ ಚೌಧರಿ ಚುನಾವಣಾ ಖರ್ಚು ವೆಚ್ಚಗಳ ಅಬ್ಸರ್ವರ್. ತಾಲೂಕು ಚುನಾವಣಾಧಿಕಾರಿಯಾಗಿರುವ ಪುತ್ತೂರು ಉಪವಿಭಾಗಾಧಿಕಾರಿ ಪ್ರಸನ್ನ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿರುವ ಪುತ್ತೂರು ತಹಾಸೀಲ್ದಾರ್ ಕುಳ್ಳೇ ಗೌಡರ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯ ನಡೆಸಲಾಗಿತ್ತು. 5 ಖಾಸಗಿ ಬಸ್ಸುಗಳು, 20 ಸರ್ಕಾರಿ ಬಸ್ಸುಗಳು, 4 ಮಿನಿ ಬಸ್ಸು, 18 ಮ್ಯಾಕ್ಸಿಕ್ಯಾಬ್, 13 ಜೀಪುಗಳು ಪುತ್ತೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿರುತ್ತದೆ. ಕ್ಷೇತ್ರದಲ್ಲಿ ಒಟ್ಟು 1,79,442 ಮತದಾರರಿದ್ದಾರೆ.
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಶನಿವಾರ ಬೆಳಗ್ಗೆ ಮತಯಂತ್ರ ಸಹಿತ ಚುನಾವಣಾ ಸಿಬ್ಬಂದಿ ಬೂತ್‌ಗಳತ್ತ ಹೊರಟರು.
ಬೇರೆ ತಾಲೂಕುಗಳಿಂದ ಬಂದ ಚುನಾವಣಾ ಸಿಬ್ಬಂದಿ ಸುಳ್ಯ ನೆಹರೂ ಸ್ಮಾರಕ ಕಾಲೇಜು ಆವರಣದಲ್ಲಿ ಚುನಾವಣೆ ಕುರಿತು ಮಾಹಿತಿ ಪಡೆದು ಸಕಲ ಸನ್ನದ್ದರಾಗಿ ತಮಗೆ ಸಿದ್ಧ ಪಡಿಸಿದ ವಾಹನಗಳಲ್ಲಿ ಬೂತ್‌ಗಳಿಗೆ ತೆರಳಿದರು.
ಇವರೊಂದಿಗೆ ಬೂತ್‌ಗಳ ಭದ್ರತೆ ಹೊತ್ತಿರುವ ಪೊಲೀಸರು, ಅರೆಸೈನಿಕ ಪಡೆಯವರು ಕೂಡ ತೆರಳಿದರು.
ಬೆಳ್ತಂಗಡಿ: ತಾಲೂಕಿನ ಎಲ್ಲಾ ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿ ಹಾಗೂ ಚುನಾವಣಾಧಿಕಾರಿಗಳ ನಿಯೋಜನೆಯಾಗಿದ್ದು, ಮತಗಟ್ಟೆಗಳಿಗೆ ತೆರಳಲು ತಯಾರಾಗಿದ್ದರೆ. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಹಾಗೂ ಸೂಚನೆಯನ್ನು ಶನಿವಾರ ಬೆಳಗ್ಗೆ ನೀಡಲಾಯಿತು.
1100 ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 800 ಪೊಲೀಸ್ ಸಿಬ್ಬಂದಿ ರಕ್ಷಣೆಯ ಕಾರ್ಯ ನಿರ್ವಹಿಸಲಿದ್ದಾರೆ.