ಮರ್ಕಂಜ: ರಾಜಕೀಯ ಸಂಘರ್ಷ- ಇತ್ತಂಡದಿಂದ ದೂರು
ಸುಳ್ಯ: ವಿಧಾನಸಭಾ ಚುನಾವಣೆಯ ಮುನ್ನಾ ದಿನವಾದ ಶನಿವಾರ ಮರ್ಕಂಜ ಬಳಿ ಬಿಜೆಪಿ- ಕಾಂಗ್ರೆಸ್ ಮಧ್ಯೆ ರಾಜಕೀಯ ಸಂಘರ್ಷ ಸಂಭವಿಸಿದೆ. ಈ ಕುರಿತಂತೆ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದೆ.
ಮರ್ಕಂಜ ಗ್ರಾಮದ ಕುದ್ಕುಳಿ ಎಂಬಲ್ಲಿ ಘಟನೆ ಸಂಭವಿಸಿದೆ. ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್.ಎಸ್. ವೆಂಕಪ್ಪ ಗೌಡ ಮೊದಲಾದವರಿದ್ದ ಕಾಂಗ್ರೆಸ್ ತಂಡವು ಮತಯಾಚನೆ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ತಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್ ಕಂಜಿಪಿಲಿ, ಈಶ್ವರಪ್ಪ ಹರ್ಲಡ್ಕ, ರವಿಚಂದ್ರ ಮೊದಲಾದವರಿದ್ದ ಬಿಜೆಪಿ ತಂಡದ ನಡುವೆ ಮಾತಿನ ಚಕಮಕಿ ನಡೆದು ಸರಸ್ವತಿ ಕಾಮತ್, ಹರೀಶ್ ಕಂಜಿಪಿಲಿ ನಡುವೆ ಸಂಘರ್ಷ ಉಂಟಾಯಿತು. ಬಳಿಕ ಎರಡೂ ಗುಂಪುಗಳ ನಡುವೆ ಹೊಡೆದಾಟ ನಡೆಯಿತು ಎನ್ನಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಸಂಘರ್ಷ ತಿಳಿಗೊಳಿಸಿದರು.
ಈ ಕುರಿತಂತೆ ಚಂದ್ರಶೇಖರ ನಾಯ್ಕ್ ಎಂಬವರು ಪೊಲೀಸ್ರಿಗೆ ದೂರು ನೀಡಿದ್ದು, ಸರಸ್ವತಿ ಕಾಮತ್ ಮತ್ತಿತರರು ನಮಗೆ ಹಣ ಹಂಚಲು ಬಂದಾಗ ನಾವು ನಿರಾಕರಿಸಿದೆವು. ಆಗ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದ್ದಾರೆ.
ಸರಸ್ವತಿ ಕಾಮತ್ ಪ್ರತಿ ದೂರು ನೀಡಿದ್ದು, ಮತಯಾಚನೆಗೆ ಹೋದಾಗ ಅಡ್ಡಗಟ್ಟಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಸೀರೆ ಎಳೆದು ಮಾನ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇತ್ತಂಡದ ದೂರು ದಾಖಲಾಗಿದೆ.