ವಿವಾಹ ನಿಶ್ಚಯವಾದ ಯುವಕ ನಾಪತ್ತೆ
ಉಪ್ಪಿನಂಗಡಿ: ಮದುವೆ ನಿಶ್ಚಯವಾಗಿದ್ದ ಕಳೆಂಜ ಗ್ರಾಮದ ಕಾಯರ್ತಡ್ಕ ನಿವಾಸಿ ಯುವಕ, ಚಿನ್ನಾಭರಣ ತರಲೆಂದು ಹೋದಾತ ಹಿಂತಿರುಗಿ ಬಾರದೆ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ದಿ. ಬೆಂಜಮಿನ್ ಮಾಂತೆರೋ ಎಂಬವರ ಪುತ್ರ ಅನಿಲ್ ಮಾಂತೆರೋ (29) ನಾಪತ್ತೆಯಾಗಿದ್ದಾರೆ. ಅವರು ದುಬೈನಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದು, ತಿಂಗಳ ಹಿಂದೆ ಊರಿಗೆ ಬಂದವರು ಹೆಣ್ಣು ನೋಡಿ ಮದುವೆ ನಿಶ್ಚಿತಾರ್ಥವಾಗಿ ಮೇ 22ರಂದು ಮದುವೆಗೆ ದಿನವೂ ನಿಗದಿಯಾಗಿತ್ತು.
ಮದುವೆ ಸಂಬಂಧ ಚಿನ್ನಾಭರಣ ಖರೀದಿಸಲೆಂದು ಹಣದೊಂದಿಗೆ ಮೇ 3ರಂದು ಮನೆಯಿಂದ ಹೊರಟವರು ಹಿಂತಿರುಗಿ ಬರಲಿಲ್ಲ ಎಂದು ಅವರ ಅಣ್ಣ ವಾಸ್ಕಲ್ ಮಾಂತೆರೋ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಚಿನ್ನಾಭರಣ ಖರೀದಿಸಲು ಹೋದವರು ನಾಪತ್ತೆಯಾಗಿರುವುದು ನಾನಾ ಸಂದೇಹಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸರಗಳ್ಳಿಯರ ಬಂಧನ
ಬೆಳ್ತಂಗಡಿ: ಇಬ್ಬರು ಸರಗಳ್ಳಿಯರನ್ನು ಇಲ್ಲಿನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಮಿಳುನಾಡಿನ ಮಧುರೈ ನ ವಾಡಿಪಟ್ಟಿಯ ವಿಜಯಾ, ಸಂಗೀತಾ ಎಂದು ಗುರುತಿಸಲಾಗಿದೆ. ಇವರಿಬ್ಬರು ಅನಮಾನಾಸ್ಪದವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದರು.