ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶೇ.85ಕ್ಕೂ ಹೆಚ್ಚು ಮತದಾನ ನಿರೀಕ್ಷೆ

Vishwanath S
Updated On : 5 May 2013, 11:55 am

ಉಡುಪಿ: ಉಡುಪಿ ಜಿಲ್ಲೆಯಲ್ಲಿ 2008ರ ವಿಧಾನಸಭಾ ಚುನಾವಣೆಯಲ್ಲಿ ಶೇ.75.88ರಷ್ಟು ಮತದಾನವಾಗಿತ್ತು, ಈ ಬಾರಿಯ ಚುನಾವಣೆಯಲ್ಲಿ ಶೇ 85ಕ್ಕೂ ಹೆಚ್ಚು ಮತದಾನದ ನಿರೀಕ್ಷೆ ಇದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಎ. ಪ್ರಭಾಕರ ಶರ್ಮ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ಮತದಾರರು ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸ್ವೀಪ್ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ, ಜನರಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. ಆದ್ದರಿಂದ ಶೇ 85ರಷ್ಟು ಮತದಾನ ಭರವಸೆ ಮೂಡಿದೆ ಎಂದವರು ಹೇಳಿದರು.
1000ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಮೂಲಕ 1.53 ಲಕ್ಷ ಕುಟುಂಬಗಳಿಗೆ, 1140 ಅಂಗನವಾಡಿ ಕಾರ್ಯಕರ್ತೆಯರ ಮತ್ತು 600 ಆಶಾ ಕಾರ್ಯಕರ್ತೆಯರ ಮೂಲಕ 68,000 ತಾಯಂದಿರಿಗೆ, ಮೀನುಗಾರಿಕಾ ಇಲಾಖೆಯ ಮೂಲಕ ಸುಮಾರು 45,000 ಮೀನುಗಾರರಿಗೆ, ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ 55,000 ಕಾರ್ಮಿಕರಿಗೆ, ನಗರಾಡಳಿತ ಸಂಸ್ಥೆಗಳ 500 ಮಂದಿ ಪೌರ ಕಾರ್ಮಿಕರಿಗೆ ಮತದಾನದಲ್ಲಿ ಭಾಗವಹಿಸುವ ಸಂದೇಶ ನೀಡಲಾಗಿದೆ. ಮಣಿಪಾಲ ವಿವಿಯ ಕುಲಪತಿಗಳು ತಮ್ಮ ಸಂಸ್ಥೆಯ 4000 ಸಿಬ್ಬಂದಿಗೆ ಇಮೇಲ್ ಮೂಲಕ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ವಿವಿಧ ಬ್ಯಾಂಕುಗಳ ಮೂಲಕ 4,000 ಸಿಬ್ಬಂದಿಯಿಂದ ಮತದಾನದಲ್ಲಿ ಭಾಗವಹಿಸುವ ಪ್ರತಿಜ್ಞಾ ಪತ್ರಗಳಿಗೆ ಸಹಿ ಪಡೆಯಲಾಗಿದೆ.
ಬಸ್ಸುಗಳಲ್ಲಿ ಬ್ಯಾನರುಗಳ ಮೂಲಕ, ಮಲ್ಪೆ, ಕಾಪು ಮುಂತಾದ ಪ್ರವಾಸಿ ತಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ, ಯಕ್ಷಗಾನ ಮತ್ತು ಬೀದಿನಾಟಕಗಳ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಪ್ರತಿ ಮನೆಮನೆಗೆ ಜಿಲ್ಲಾಧಿಕಾರಿಗಳ ಮನವಿ ಪತ್ರ ತಲುಪಿಸಲಾಗಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯ ಮೂಲಕ ಮತದಾನದ ಬಗ್ಗೆ ಸಿನೆಮಾ ಪ್ರದರ್ಶಿಸಲಾಗಿದೆ, ಅಕಾಶವಾಣಿ ಮತ್ತು ಎಫ್‌ಎಂ ಕೇಂದ್ರಗಳಲ್ಲಿ ಸಂದೇಶ ಬಿತ್ತರಿಸಲಾಗಿದೆ, ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ, ವಿಶೇಷವಾಗಿ ಪ್ಯಾರಾ ಗ್ಲೈಡಿಂಗ್ ಹಾರಾಟದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗಿದೆ, ಗ್ರಾಪಂಗಳಲ್ಲಿ ಜಾಥಾ ಆಯೋಜಿಸಲಾಗಿದೆ, ಕೊರಗರ ಕಾಲೋನಿಗಳಲ್ಲಿ, ಸ್ಲಂ ಏರಿಯಾಗಳಲ್ಲಿ ಮಾಹಿತಿ ಕಾರ್ಯಕ್ರಮ ನಡೆಸಲಾಗಿದೆ  ಎಂದು ಪ್ರಭಾಕರ ಶರ್ಮ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಎಂ. ಜುಂಜಣ್ಣ, ಸದಸ್ಯ ಶ್ರೀಧರ ನಾಯಕ್, ಜಿಲ್ಲಾ ಮತದಾರರ ಜಾಗೃತಿ ಅಧಿಕಾರಿ ಮೊಸೆಸ್ ಜಯಶೇಖರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement