ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಾಲ ಚುಕ್ತಾ ಮಾಡಿದರೂ ಮರು ಸಾಲ ಇಲ್ಲ!

Vishwanath S
Updated On : 5 May 2013, 11:52 am

ಮಂಗಳೂರು: ಬೆಳೆ ಸಾಲ ಪೂರ್ತಿ ಪಾವತಿಸಿದರೆ ರು. 25 ಸಾವಿರ ಸಾಲ ಮನ್ನಾ, ಆದರೆ ಪೂರ್ತಿ ಪಾವತಿಸಿದಷ್ಟೇ ಮೊತ್ತವನ್ನು ಮರು ಸಾಲವಾಗಿ ಸಹಕಾರಿ ಬ್ಯಾಂಕ್‌ಗಳು ನೀಡುತ್ತಿಲ್ಲ. ಇನ್ನೊಂದೆಡೆ ರಾಜ್ಯ ಸರ್ಕಾರ ಈ ಬಾರಿ ಸಾಲ ಮನ್ನಾ ಮಾಡಿದರೂ ಅದರ ಬಡ್ಡಿ ರಿಯಾಯ್ತಿ ಮೊತ್ತ ಇನ್ನೂ ಸಹಕಾರಿ ಬ್ಯಾಂಕ್‌ಗಳಿಗೆ ಸಿಕ್ಕಿಲ್ಲ.
ಈ ಎರಡು ಕಾರಣಕ್ಕೆ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಹೇಗೂ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈ ವಿಚಾರದಲ್ಲಿ ಯಾರೂ ಚಕಾರವೆತ್ತುತ್ತಿಲ್ಲ. ಇದರಿಂದ ಅಗತ್ಯ ಸಾಲಕ್ಕಾಗಿ ರೈತರು ಪರದಾಡುವಂತಾಗಿದೆ.
ಬಡ್ಡಿ ಮನ್ನಾ ತಂದ ಫಜೀತಿ: ಸರ್ಕಾರವೇನೋ ರೈತರಿಗೆ ನೆರವಾಗಲೆಂದು ಬೆಳೆ ಸಾಲಕ್ಕೆ ಬಡ್ಡಿ ಮನ್ನಾ ಘೋಷಿಸಿದೆ, ಆದರೆ ಅದಕ್ಕೂ ಹಿಂದಿನ ವರ್ಷದ ಸಾಲ ಮನ್ನಾ ಮೊತ್ತವನ್ನು ಸರ್ಕಾರವೇ ಬಾಕಿ ಇರಿಸಿರುವುದರಿಂದ ಸಹಕಾರಿ ಬ್ಯಾಂಕ್‌ಗಳು ಕೇಳಿದಷ್ಟು ಮರು ಸಾಲ ನೀಡುತ್ತಿಲ್ಲ.
2011-12ನೇ ಸಾಲಿನಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದ ರೈತರಿಗೆ ಸಾಲದ ಮೇಲೆ ರು. 25 ಸಾವಿರ ಮೊತ್ತವನ್ನು ಸರ್ಕಾರ ಮನ್ನಾ ಮಾಡಿತ್ತು. ಸರ್ಕಾರದ ಮಾತು ಕೇಳಿ ಬ್ಯಾಂಕಿಗೆ ತೆರಳಿದ ರೈತರು ತಮ್ಮ ಸಾಲದ ಪೂರ್ತಿ ಮೊತ್ತ ಪಾವತಿ ಮಾಡಿ ರು. 25 ಸಾವಿರ ರಿಯಾಯ್ತಿ ಪಡೆದರು. ಮರು ಸಾಲಕ್ಕೆ ಅರ್ಜಿ ಗುಜರಾಯಿಸಿದಾಗ ತಮಗೆ ಹಿಂದಿದ್ದಷ್ಟು ಪೂರ್ತಿ ಸಾಲ ಸಿಗುತ್ತಿಲ್ಲ ಎಂಬುದು ಅರಿವಿಗೆ ಬಂದಿತ್ತು.
ಈ ಬಗ್ಗೆ ಪ್ರಶ್ನಿಸಿದರೆ ಸಹಕಾರಿ ಬ್ಯಾಂಕ್‌ಗಳು, 'ನಮಗೆ ಮನ್ನಾ ಮೊತ್ತ ಸರ್ಕಾರದಿಂದ ಕೂಡಲೇ ಸಿಗುವುದಿಲ್ಲ. ಹಿಂದಿನ ವರ್ಷದ ಮೊತ್ತವೂ ಸಿಕ್ಕಿಲ್ಲ. ಹಾಗಾಗಿ ಮನ್ನಾ ಮೊತ್ತ ಬಿಡುಗಡೆಯಾದ ಬಳಿಕ ಪೂರ್ತಿ ಸಾಲ ನೀಡುವ' ವಾಗ್ದಾನ ಮಾಡುತ್ತಿವೆ ಎನ್ನುತ್ತಾರೆ ಸಾಲಗಾರ ರೈತರು. ಒಂದೆಡೆ ಸಾಲ ಮನ್ನಾ ಪ್ರಯೋಜನ, ಇನ್ನೊಂದೆಡೆ ಪೂರ್ತಿ ಸಾಲ ಮಂಜೂರು ಮಾಡದೆ ರೈತರನ್ನು ಯಾಮಾರಿಸುತ್ತಿರುವ ಬ್ಯಾಂಕ್‌ಗಳು.
ಬ್ಯಾಂಕ್‌ಗಳ ತಗಾದೆ ಏನು?: 2010-11ನೇ ಸಾಲಿನಲ್ಲಿ ಅಲ್ಪಾವಧಿ ಬೆಳೆ ಸಾಲದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ 87 ಸಾವಿರ ರೈತರಿಗೆ ರು. 10 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ತಲಾ ರು. 25 ಸಾವಿರ ಮನ್ನಾ ಆಗಿದ್ದು, ಮನ್ನಾ ಮೊತ್ತವನ್ನು ಸರ್ಕಾರ ಇದುವರೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ನೀಡಿಲ್ಲ. ಡಿಸಿಸಿ ಬ್ಯಾಂಕ್ ಹಾಗೂ ತಾಲೂಕಿನಲ್ಲಿರುವ ಸಹಕಾರಿ ಸಂಘಗಳು ತಮ್ಮದೇ ಬಂಡವಾಳದಿಂದ ಸಾಲ ನೀಡಿದ್ದೇ ವಿನಃ ಸರ್ಕಾರದ ಹಣದಿಂದಲ್ಲ. ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್‌ಗೆ ತನ್ನ ಬಂಡವಾಳದಿಂದಲೂ ಪಾವತಿಸಿದೆ.
2011-12 ಸಾಲಿನಲ್ಲಿ ಡಿಸಿಸಿ ಬ್ಯಾಂಕ್ 93 ಸಾವಿರ ರೈತರಿಗೆ ರು. 48 ಕೋಟಿ ಸಾಲ ನೀಡಿದ್ದು, ಇಲ್ಲಿಯೂ ರು. 25 ಸಾವಿರ ಸಾಲ ಮನ್ನಾ ಮೊತ್ತ ಕಳೆದರೂ ಆ ಮೊತ್ತವನ್ನು ಸರ್ಕಾರ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಿಲ್ಲ. ಈಗ ಸಹಕಾರಿ ಬ್ಯಾಂಕ್‌ಗಳು ರು. 25 ಸಾವಿರ ಮನ್ನಾ ಮಾಡಿದರೂ ಸಾಲಗಾರ ಸದಸ್ಯರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಮನ್ನಾ ಮೊತ್ತ ಪಾವತಿಯಾದ ಬಳಿಕವೇ ಸದಸ್ಯರಿಗೆ ಪೂರ್ತಿ ಸಾಲ ನೀಡಲು ಸಾಧ್ಯ ಎನ್ನುವುದು ಬ್ಯಾಂಕ್‌ಗಳ ವಾದ.
ಬಡ್ಡಿಯೇ ನಿಗದಿಯಾಗಿಲ್ಲ: 2012-13 ಸಾಲಿನ ರೈತರ ಬೆಳೆ ಸಾಲದ ಮೇಲಿನ ಬಡ್ಡಿ ಎಷ್ಟು? ಸರ್ಕಾರ ಹೇಳಿದ್ದು ರು. 1 ಲಕ್ಷ ವರೆಗೆ ಸೊನ್ನೆ ಬಡ್ಡಿಯಿಂದ ಶೇ.1ರ ವರೆಗೆ. ಇದು ಬಾಯ್ಮಾತಿನಲ್ಲೇ ಉಳಿದಿದೆ. ಯಾಕೆಂದರೆ ಎಷ್ಟು ಬಡ್ಡಿ ಬರ ವಿಧಿಸಬೇಕು ಎಂಬ ಬಗ್ಗೆ ಸರ್ಕಾರ ಈವರೆಗೆ ಯಾವುದೇ ಮಾರ್ಗಸೂಚಿಯನ್ನು ಸಹಕಾರಿ ಬ್ಯಾಂಕ್‌ಗಳಿಗೆ ರವಾನಿಸಿಲ್ಲ ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್.
ಬಡ್ಡಿದರ ನಿಗದಿಯಾಗದ ಹಿನ್ನಲೆಯಲ್ಲಿ ಸಾಲ ಮನ್ನಾ ಮಾಡಿದರೂ ಸರ್ಕಾರಕ್ಕೆ ಲೆಕ್ಕ ಕೊಡುವಾಗ ಯಾವ ಬಡ್ಡಿದರ ಕಾಣಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಇದರಿಂದ ರೈತರಿಗೆ ಮರು ಸಾಲ ನೀಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಸಹಕಾರಿ ಸಂಘಗಳ ಉಪನಿಬಂಧಕರ ಮೂಲಕ ಬರೆದುಕೊಂಡರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅವರು.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement