ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಡುಪಿ ಜಿಲ್ಲಾದ್ಯಂತ ಮತದಾನ ಯಶಸ್ವಿ

Vishwanath S
Updated On : 6 May 2013, 11:37 am

ಉಡುಪಿ: ಕುಂದಾಪುರ- ಕಾರ್ಕಳ- ರಾಜ್ಯದ ಭ್ರಷ್ಟ ರಾಜಕೀಯ ಗೊಂದಲಮಯ ಪರಿಸ್ಥಿತಿಯಲ್ಲಿಯೂ ಉಡುಪಿ ಜಿಲ್ಲಾದ್ಯಂತ ಜನರು ಗುಂಪುಗಳಲ್ಲಿ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು. ಜಿಲ್ಲೆಯಲ್ಲಿ ಶೇ. 75ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದ್ದು, ತಾವಿನ್ನೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡಿಲ್ಲ ಎನ್ನುವುದನ್ನು ಜಿಲ್ಲೆಯ ಮತದಾರರು ತೋರಿಸಿಕೊಟ್ಟರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 1038 ಮತಗಟ್ಟೆಗಳಲ್ಲಿ, 1320 ಅರೆಮಿಲಿಟರಿ ಯೋಧರ ಮತ್ತು 1260 ಪೊಲೀಸರ ಬಿಗಿ ಬಂದೋಬಸ್ತು ಮತ್ತು 6499 ಮಂದಿ ಚುನಾವಣಾ ಸಿಬ್ಬಂದಿಯ ಕಾರ್ಯನಿರ್ವಹಣೆಯೊಂದಿಗೆ ಭಾನುವಾರ ನಡೆದ ವಿಧಾನಸಭಾ ಚುನಾವಣೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈ ಬಾರಿ ಮತದಾನ ಹೆಚ್ಚಿಸಲು ಚುನಾವಣಾ ಆಯೋಗವು ಸ್ವೀಪ್ (ಮತದಾನ ಮಾಡುವಂತೆ ಪ್ರೇರೆಪಿಸುವ ವ್ಯವಸ್ಥಿತ ಕಾರ್ಯಕ್ರಮ) ಎಂಬ ಹೊಸ ಪ್ರಯೋಗವೊಂದನ್ನು ನಡೆಸಿದ್ದರಿಂದ, ನಿರೀಕ್ಷೆಯಂತೆ ಜಿಲ್ಲಾದ್ಯಂತ ಮತದಾನದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆಯಲ್ಲಿ ಕಾಯುತ್ತಿದ್ದುದು ಕಂಡು ಬಂತು, ಸಂಜೆಯವರೆಗೂ ಒಂದೇ ಪ್ರಮಾಣದಲ್ಲಿ ಮತದಾನ ನಡೆಯುತ್ತಿತ್ತು.
ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶೇ 43ರಷ್ಟು ಮತದಾನವಾಗಿದ್ದು, ಸಂಜೆ 6 ಗಂಟೆಯ ಹೊತ್ತಿಗೆ ಮತದಾನದ ಪ್ರಮಾಣ ಶೇ 80 ದಾಟುವ ಪೂರಾ ಸಾಧ್ಯತೆಗಳನ್ನು ತೋರಿಸಿತು. ಇದರಿಂದ ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿಗಳ ಮಾತಿನಲ್ಲಿ ಸಂತಸ, ತೃಪ್ತಿ ವ್ಯಕ್ತವಾಗುತ್ತಿತ್ತು.
ಮಹಿಳೆಯರ ಸಂಖ್ಯೆ ಹೆಚ್ಚು: ಜಿಲ್ಲೆಯಲ್ಲಿ ಪುರುಷ ಮತದಾರರಿಗಿಂತ 47 ಸಾವಿರದಷ್ಟು ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಮಹಿಳಾ ಮತದಾನದ ಪ್ರಮಾಣ ಕೂಡ ಹೆಚ್ಚಾಗಿರುವ ಸಾದ್ಯತೆ ಇದೆ. ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆಯೇ ಮಹಿಳೆಯರು ಸಾಲುಗಟ್ಟಿ ನಿಂತು ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದು ಕಂಡು ಬಂತು. ಸಾಕಷ್ಟು ಸಂಖ್ಯೆಯಲ್ಲಿ ವಯೋವೃದ್ಧ ಮಹಿಳೆಯರು ಮತದಾನದಲ್ಲಿ ಭಾಗವಹಿಸಿದ್ದು ಯುವ ಮತದಾರರಿಗೆ ಸ್ಫೂರ್ತಿ ತುಂಬುವಂತಿತ್ತು.
ನವ ಮತದಾರರ ಉತ್ಸಾಹ: 2012ರ ಲೋಕಸಭಾ ಉಪಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 7.80 ಲಕ್ಷ ಮತದಾರರಿದ್ದರು, ಇದೀಗ ಜಿಲ್ಲೆಯಲ್ಲಿ 8.77 ಲಕ್ಷ ಮತದಾರರಿದ್ದಾರೆ. ಅಂದರೆ ಈ ಮಧ್ಯೆ ಸುಮಾರು 97 ಸಾವಿರದಷ್ಟು ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಭಾನುವಾರ ಎಲ್ಲಾ ಮತಗಟ್ಟೆಗಳಲ್ಲಿ ಈ ಹೊಸ ಮತದಾರರ ಸಂಖ್ಯೆ ಸಾಕಷ್ಟು ಇತ್ತು. ಅವರಲ್ಲಿ ಅನೇಕ ಮಂದಿ ತಾವು ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವುದರಿಂದ ರೋಮಾಂಚನಗೊಂಡಿರುವುದಾಗಿ ಹೇಳಿದರು.
ನಕ್ಸಲ್ ಏರಿಯಾದಲ್ಲಿ ಉತ್ತಮ: ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಉತ್ತಮ ಮತದಾನ ನಡೆದಿದೆ. ಕಾರ್ಕಳ ತಾಲೂಕಿನ ವರಂಗ, ಹೆಬ್ರಿ, ನಾಡ್ಪಾಲು, ಅಜೆಕಾರು ಮುಂತಾದ ಗ್ರಾಮಗಳಲ್ಲಿ, ಕುಂದಾಪುರ ತಾಲೂಕಿನ ಕೊಲ್ಲೂರು, ಜಟ್ಕಲ್, ಹಳ್ಳಿಹೊಳ್ಳೆ, ಅಮಾಸೆಬೈಲು ಮುಂತಾದ ನಕ್ಸಲ್ ಬಾಧಿತ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಿರ್ಭೀತಿಯಿಂದ ಜನರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಕಳೆದ ಬಾರಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶೇ 80ರಷ್ಟು ಮತದಾನವಾಗಿದ್ದು ಈ ಬಾರಿ ಅದು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.
ಒಂದು ಮಾತ್ರ ಕಪ್ಪು ಚುಕ್ಕೆ: ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆ ಗ್ರಾಮದ ಮತಗಟ್ಟೆಯಲ್ಲಿ ಮಾತ್ರ ಸಣ್ಣ ಮಟ್ಟಿನ ಅಹಿತಕರ ಘಟನೆ ನಡೆಯಿತು. ಮತಗಟ್ಟೆಯ ಬಳಿ ಜನರು ಗುಂಪು ಸೇರಿದ್ದನ್ನು ಚದುರಿಸುವ ಸಂದರ್ಭದಲ್ಲಿ ಪೊಲೀಸರು ಒಬ್ಬರನ್ನು ತಳ್ಳಿದ್ದು ಮಾತಿನ ಚಕಮಕಿಗೆ ಕಾರಣವಾಯಿತು. ಇದರಿಂದ ಇನ್ನಷ್ಟು ಸಂಖ್ಯೆಯಲ್ಲಿ ಜನ ಸೇರಿದರು. ಕೊನೆಗೆ ಸುಮಾರು 30 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತು. ನಂತರ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ಪರಿಸ್ಥಿತಿಯನ್ನು ನಿಭಾಯಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement